ಕೊಕ್ಕಡ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ➤‌ ಆರೋಪಿಗೆ ಜೈಲುಶಿಕ್ಷೆ

(ನ್ಯೂಸ್ ಕಡಬ) newskadaba.com ಕೊಕ್ಕಡ, ಸೆ 24. ಅಪ್ರಾಪ್ತೆ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.


ಆರೋಪಿ ಕೊಕ್ಕಡದ ಪದ್ಮನಾಭ ಎಂಬಾತ ಶಿಕ್ಷೆಗೊಳಗಾದವ. ಈತ 2019ರ ಆಗಸ್ಟ್ 17ರಂದು ಮಧ್ಯಾಹ್ನ ತರಗತಿ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿ, ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದಿದ್ದ. ಈ ವೇಳೆ ನೊಂದ ಬಾಲಕಿ ಹೆದರಿ ಆರೋಪಿಯ ಹಿಡಿತದಿಂದ ಬಿಡಿಸಿಕೊಂಡು ತನ್ನ ಗೆಳತಿಯ ಮನೆಗೆ ಓಡಿ ಆಕೆಯಲ್ಲಿ ಹಾಗೂ ಆಕೆಯ ತಂದೆಯಲ್ಲಿ ವಿಚಾರ ತಿಳಿಸಿದ್ದಳು. ಈ ವೇಳೆ ಆರೋಪಿ ಪದ್ಮನಾಭ ನೊಂದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಬಾಲಕಿಯ ಗೆಳತಿಯ ತಂದೆಗೂ ಅವಾಚ್ಯ ಶಬ್ದಗಳಿಂದ ಬೈದಿದ್ದ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಕೈಗೆತ್ತಿಕೊಂಡ ಧರ್ಮಸ್ಥಳ ಠಾಣಾ ಎಸ್.ಐ. ಚಂದ್ರಶೇಖರ್ ಅವರು ಆರೋಪಿ ಪದ್ಮನಾಭನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿರವರು ಆರೋಪಿ ಪದ್ಮನಾಭನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಪೋಕ್ಸೋ ಕಾಯ್ದೆ ಕಲಂ 12ರಡಿ ಅಪರಾಧಕ್ಕೆ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ, ಐಪಿಸಿ 354(ಡಿ)ರಡಿಯ ಅಪರಾಧಕ್ಕಾಗಿ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ ಮತ್ತು ಐಪಿಸಿ 341ರಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.

Also Read  ಚಲಿಸುತ್ತಿದ್ದ ಸ್ಕೂಟರ್ ಗೆ ಲಾರಿ ಢಿಕ್ಕಿ ➤ ಅವಳಿ ಮಕ್ಕಳು ಮೃತ್ಯು, ತಂದೆ-ತಾಯಿ ಸ್ಥಿತಿ ಚಿಂತಾಜನಕ...!

error: Content is protected !!
Scroll to Top