(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 13. ತಾಲೂಕಿನ ಮಿತ್ತೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಮೀನಿನಲ್ಲಿ ಬೆಳೆದ ಅಡಕೆ ಮಾರಾಟದಿಂದ ಬಂದ ಆದಾಯದಿಂದ ವಿದ್ಯಾರ್ಥಿಗಳಿಗೆ ಶಾಲಾ ಬಸ್ ಖರೀದಿಸಲಾಗಿದೆ.
112 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗೆ ನಾಲ್ಕು ಎಕರೆ ಜಮೀನಿದ್ದು, 2017ರಲ್ಲಿ ಇಲ್ಲಿನ ಎಸ್ ಡಿಎಂಸಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 628 ಅಡಿಕೆ ಸಸಿಗಳನ್ನು ನೆಟ್ಟಿದ್ದು, ಇದೀಗ ಇಳುವರಿ ಪಡೆಯುತ್ತಿದ್ದಾರೆ. ಶಾಲೆಯ ಹೊಲವನ್ನು ಹೊರಗುತ್ತಿಗೆ ನೀಡಲಾಗಿದ್ದು ಇದರಿಂದ ಶಾಲೆಗೆ ವಾರ್ಷಿಕ 2.50 ಲಕ್ಷ ಆದಾಯ ಬರುತ್ತಿದೆ ಎನ್ನಲಾಗಿದೆ. ಇದೀಗ ಬಂದ ಆದಾಯದಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು 26 ಆಸನಗಳ ಬಸ್ ಖರೀದಿಸಲಾಗಿದೆ. ಇದರ ನಿರ್ವಹಣೆಯನ್ನು ಅಡಿಕೆ ತೋಟದ ಆದಾಯದಿಂದಲೇ ಎಸ್‌ಡಿಎಂಸಿ ನಿರ್ವಹಿಸುತ್ತದೆ. ಬಸ್ ಸಂಚಾರಕ್ಕೆ ಶಾಸಕ ಸಂಜೀವ ಮಠಂದೂರುರವರು ಇತ್ತೀಚೆಗೆ ಚಾಲನೆ ನೀಡಿದರು. ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.