ಉಪ್ಪಿನಂಗಡಿ: 8,800 ರೂ. ಮುಖಬೆಲೆಯ ಮೊಬೈಲ್ 1,785 ರೂ.ಗೆ ಎಂದು ಕರೆಯನ್ನು ನಂಬಿ ಹಣ ಕಳೆದುಕೊಂಡ ವ್ಯಕ್ತಿ ➤‌ ಫೋನ್ ಬದಲು ಕೆಟ್ಟು ಹೋದ ತಿಂಡಿ ಕಳುಹಿಸಿ ವಂಚನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 13. ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆ 8,800 ರೂ. ಮುಖಬೆಲೆಯ ಮೊಬೈಲ್‌ ಫೋನ್‌ ಅನ್ನು 1,785 ರೂ.ಗೆ ಕಳುಹಿಸಲಾಗಿದೆ ಎನ್ನುವ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್‌ ಖರೀದಿಸಿದ ವ್ಯಕ್ತಿಗೆ ಮೊಬೈಲ್‌ ಫೋನ್‌ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

 

ಉಪ್ಪಿನಂಗಡಿಯ ದೇಗುಲದಲ್ಲಿ ಭದ್ರತಾ ಸಿಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭವಾನಿ ಶಂಕರ್‌ ಎಂಬವರು, ಇತ್ತೀಚೆಗೆ ತನ್ನ ಮನೆಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್‌ ಫೋನ್‌ಗಳನ್ನು ಖರೀದಿಸಿದ್ದರು. ಬಳಿಕ ಅವರ ಮೊಬೈಲ್‌ಗೆ ಸಂಸ್ಥೆಯೊಂದರ ಅಧಿಕಾರಿ ಎಂಬ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೋರ್ವ ಮೂರು ಮೊಬೈಲ್‌ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆ 8,800 ರೂ. ಮುಖಬೆಲೆಯ ಮೊಬೈಲ್‌ ಅನ್ನು ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದರು. ತಾನು ಫೋನ್‌ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದು ನಿಜವಾಗಿರಬಹುದು ಎಂದು ನಂಬಿದ ಭವಾನಿ ಶಂಕರ್‌ ಸೋಮವಾರದಂದು ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್‌ ಅನ್ನು ಹಣ ನೀಡಿ ಪಡೆದುಕೊಂಡಿದ್ದರು. ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್‌ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್‌ ಮಾಡಿ ಕಳುಹಿಸಿರುವುದು ಕಂಡುಬಂದಿದೆ.

Also Read  ಮೂವರು ಬೈಕ್ ಕಳ್ಳರ ಬಂಧನ; ಬೈಕ್‌ಗಳು ಪೊಲೀಸ್ ವಶಕ್ಕೆ

error: Content is protected !!
Scroll to Top