(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 11. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಪಡೆದ ಕಾರಣಕ್ಕಾಗಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸ್ಥಾನ ಸಿಗುವುದಿಲ್ಲವೆಂದು ಮನನೊಂದು ಕುಂದಾಪುರ ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಯಿಷ್ ಶೆಟ್ಟಿ ಆತ್ಮಹತ್ಯೆಗೈದಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.
ಇಂದು ನೀಟ್ ಎಂಬ ಕೇಂದ್ರೀಕೃತ
ಪರೀಕ್ಷೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದಿದ್ದು, ಇಂದು ನೀಟ್ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ನೀಟ್ ಪರೀಕ್ಷೆಯ ಲೋಪದೋಷಗಳನ್ನು ಅರಿತ ತಮಿಳುನಾಡು ಸರ್ಕಾರ ನಿರ್ಣಯವನ್ನೂ ಸಹ ಮಂಡಿಸಿತ್ತು, ಸಿಇಟಿ ಸೀಟ್ ಹಂಚಿಕೆಯ ವಿಚಾರದಲ್ಲೂ ಬದಲಾವಣೆ ತರಲು ಈಗಾಗಲೇ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು. ಈ ನೀಟ್ ಎಂಬ ಅರ್ಹತಾ ಪರೀಕ್ಷೆಯಿಂದ ದೊಡ್ಡ ಪ್ರಮಾಣದ ನಷ್ಟ ತುಳಿತಕ್ಕೊಳಗಾದ ಸಮುದಾಯಗಳಿಗೆ ಆಗುತ್ತಿರುವುದು ಪರೀಕ್ಷೆಯ ಮೂಲಕ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ವರ್ಗದ ವಿದ್ಯಾರ್ಥಿಗಳ ಅಂಕಿ ಅಂಶಗಳೇ ಸಾರಿ ಹೇಳುತ್ತವೆ. ಇದೆಲ್ಲವನ್ನು ಗಮನಿಸುವಾಗ ಹಲವು ರೀತಿಯ ಗೊಂದಲಗಳಿಂದ ಕೂಡಿರುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಹಾಗೂ ವಿದ್ಯಾರ್ಥಿ ಸಾಯಿಷ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಆಗ್ರಹಿಸಿದ್ದಾರೆ.