(ನ್ಯೂಸ್ ಕಡಬ) newskadaba.com ಕಡಬ, ನ.16. ಸರಕಾರದಿಂದ ದೊರೆಯಲ್ಪಡುವ ಸಹಾಯಧನ ಬಿಡುಗಡೆಗಾಗಿ ಕಡಬದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
ಕಡಬದ ವ್ಯಾಪಾರಿಯಾಗಿದ್ದ ಜೋನ್ಸನ್ ಪಿ.ಜೆ. ಎಂಬವರಿಂದ 2009 ಜೂನ್ 26 ರಂದು ಲಂಚಕ್ಕೆ ಬೇಡಿಕೆ ಇಟ್ಟು, ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ಭಾಸ್ಕರ ಪ್ರಭು ಎಂಬವರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 15000 ದಂಡ ವಿಧಿಸಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಕೆಲವೇ ದಿನಗಳಲ್ಲಿ ಭಾಸ್ಕರ ಪ್ರಭುರವರು ಸೇವೆಯಿಂದ ನಿವೃತ್ತಿಯಾಗಿದ್ದು, ಇದೀಗ ಅವರಿಗೆ 67 ವರ್ಷ ಪ್ರಾಯವಾಗಿದೆ. ಆಗಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಉದಯ ನಾಯಕ್ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಅವರು ಶಿಕ್ಷೆಯನ್ನು ಪ್ರಕಟಿಸಿದರು. ಲೋಕಾಯುಕ್ತರ ಪರವಾಗಿ ವಿಶೇಷ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.