(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 24. ನೇತ್ರಾವತಿ ನದಿ ನೀರಿಗೆ ಕಸ ಹಾಗೂ ಮಲಿನ ತ್ಯಾಜ್ಯಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಇಲ್ಲಿನ ನದಿ ದಡದಲ್ಲಿರುವ ಬಾರ್ & ರೆಸ್ಟೋರೆಂಟ್‌ಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.
ನಿರಾಲ ಬಾರ್ & ರೆಸ್ಟೋರೆಂಟ್‌ನವರು ಹೊಟೇಲ್‌ನ ಕಸ ಹಾಗೂ ಮಲಿನ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಬಗ್ಗೆ ಸ್ವಚ್ಚತಾ ಘಟಕದ ಮೇಲುಸ್ತುವಾರಿ ಸಮಿತಿ ಸದಸ್ಯರು, ಪಂಚಾಯತ್ ಗೆ ನೀಡಿದ ದೂರಿನಂತೆ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಐದು ಸಾವಿರ ರೂ. ದಂಡ ವಿಧಿಸಿದ್ದಾರೆ. ನದಿಗೆ ಎಸೆಯುವ ವೇಳೆ ನದಿ ದಡದ ಮೇಲೆ ಬಿದ್ದಿರುವ ಕಸದ ರಾಶಿಯನ್ನು ಸಂಜೆಯ ಒಳಗಾಗಿ ತೆರವು ಮಾಡಬೇಕು, ಇಲ್ಲದಿದ್ದಲ್ಲಿ ಮತ್ತೆ 10 ಸಾವಿರ ರೂಪಾಯಿ ದಂಡ ತೆರಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.