(ನ್ಯೂಸ್ ಕಡಬ) newskadaba.com ಕಡಬ, ಆ. 24. ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಅಕ್ರಮ ಸಕ್ರಮ ಸಮಿತಿ ಸದಸ್ಯರು, ಸಚಿವ ಎಸ್.ಅಂಗಾರ ಅವರ ಸಮ್ಮುಖದಲ್ಲೇ ಕಡಬ ತಹಶೀಲ್ದಾರ್ ಅವರ ವಿರುದ್ಧ “ಅರ್ಹ ಕಡತಗಳನ್ನು ಅನಗತ್ಯವಾಗಿ ತಡೆಹಿಡಿದು ದುಡ್ಡಿಗಾಗಿ ಬಡವರ ರಕ್ತ ಹೀರುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಅಕ್ರಮ-ಸಕ್ರಮ ಸರಕಾರಿ ಕೃಷಿ ಜಮೀನುಗಳ ಸಕ್ರಮೀಕರಣ ಸಭೆಯು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಶಾಸಕ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ನಡೆಯಿತು. ಅಕ್ರಮ-ಸಕ್ರಮ ಕಡತ ವಿಲೇವಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆಯೆಂದು ಸಚಿವರ ಎದುರೇ ಕಡಬ ತಹಶೀಲ್ದಾರ್ ವಿರುದ್ಧ ನೇರ ಆರೋಪ ವ್ಯಕ್ತವಾಯಿತು. ಸಭೆಯಲ್ಲಿದ್ದ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಚರ್ಚೆಗೆ ಮುನ್ನುಡಿ ಬರೆದರೆ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಅರ್ಧ ಗಂಟೆಗೂ ಹೆಚ್ಚು ಕಾಲ ತಹಶೀಲ್ದಾರ್, ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಕ್ರಮ ಸಕ್ರಮ ಕಡತವೊಂದರ ಮಂಜೂರಾತಿ ಬಾಕಿ ಬಗ್ಗೆ ಬೈಠಕ್‌ನಲ್ಲಿ ಪ್ರಸ್ತಾಪಿಸಿದಾಗ, ತಹಶೀಲ್ದಾರ್ ಅನಂತಶಂಕರ್ ಅದರ ಮಂಜೂರಾತಿಗೆ ಕಾನೂನು ತೊಡಕು ಇದೆ ಎಂದು ಹೇಳಿದ್ದು, ಇದರಿಂದ ಅಕ್ರೋಶಗೊಂಡ ಕೃಷ್ಣ ಶೆಟ್ಟಿಯವರು, “ನೀವು ಕಾನೂನು ಬಾಹಿರವಾಗಿ ಎಷ್ಟು ಕಡತಗಳನ್ನು ಹಣ ಪಡೆದು ಮಾಡಿಕೊಟ್ಟಿದ್ದೀರಿ ಎಂದು ನನಗೆ ಗೊತ್ತಿದೆ. ಅರ್ಹ ಕಡತಗಳನ್ನು ಅನಾವಶ್ಯಕವಾಗಿ ತಡೆ ಹಿಡಿದು ದುಡ್ಡಿಗಾಗಿ ಬಡವರ ರಕ್ತ ಹೀರುತ್ತೀರಿ, ನಾವು ಮನಸ್ಸು ಮಾಡಿದರೆ ನೀವು ತಹಶೀಲ್ದಾರ್ ಕುರ್ಚಿಯಲ್ಲಿ ಒಂದು ನಿಮಿಷವೂ ಕೂರಲು ಬಿಡುವುದಿಲ್ಲ. ನೀವು ಎಲ್ಲೆಲ್ಲಿ, ಏನೇನು ಅಕ್ರಮ ಮಾಡಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿ ನಮಗೆ ಲಭ್ಯವಾಗಿದೆ. ನೀವು ನಿವೃತ್ತಿಯಾದರೂ ನಿಮ್ಮನ್ನು ಬೆಂಬಿಡದೆ ಕಾಡಲು ನಮಗೆ ಗೊತ್ತಿದೆ” ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಮಾತನಾಡಿದ ರಾಕೇಶ್ ರೈ ಕೆಡೆಂಜಿ ಅವರು, “ನೀವು ಕೆಲವು ಕಡತಗಳನ್ನು ಪೂರ್ವಾಗ್ರಹ ಪೀಡಿತರಾಗಿ ತಡೆಹಿಡಿಯುತ್ತೀರಿ” ಎಂದು ತರಾಟೆಗೆತ್ತಿಕೊಂಡರು. ಗೋಳಿತೊಟ್ಟು ಗ್ರಾಮದ ಗಣೇಶ್ ಬೊಟ್ಟಿಮಜಲು ಎಂಬವರು ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಮಾತನಾಡಿದ್ದನ್ನು ದ್ವೇಷವಾಗಿ ಇಟ್ಟುಕೊಂಡು ಕಳೆದ ಆರು ತಿಂಗಳಿನಿಂದ ಅವರ ಕಡತವನ್ನು ಮಂಜೂರು ಮಾಡಲು ಬಿಡಲಿಲ್ಲ. ಈಗ ಕೇಳಿದರೆ ಕಾನೂನು ತೊಡಕು ಹೇಳುತ್ತೀರಿ, ಆದರೆ ಅದೇ ಸರ್ವೆ ನಂಬರ್‌ನಲ್ಲಿ ಇತರರು ನೀಡಿದ ಅರ್ಜಿಯನ್ನು ಹಣ ಪಡೆದು ಸಕ್ರಮ ಮಾಡಿದ್ದೀರಿ, ನೀವು ಪ್ರತೀ ಕಡತಕ್ಕೆ ಹಣ ಪಡೆದು ಮಂಜೂರಾತಿಗೆ ಅನುವು ಮಾಡುತ್ತೀರಿ ಎನ್ನುವ ದೂರುಗಳಿವೆ, ಮಾತ್ರವಲ್ಲ ಮಹಿಳೆಯೊಬ್ಬರಿಂದ ಲಕ್ಷಕ್ಕೂ ಅಧಿಕ ಹಣ ಪಡೆದು ಅವರ ಕಡತವನ್ನು ಮಾಡಿಕೊಟ್ಟಿಲ್ಲ ಎನ್ನುವ ದೂರೂ ಕೇಳಿ ಬಂದಿದೆ. ಆ ಮಹಿಳೆಯ ಕಣ್ಣೀರಿನ ಶಾಪ ನಿಮಗೆ ತಟ್ಟುತ್ತದೆ. ನನಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ನೈತಿಕತೆ ಇದೆ, ನಾನು ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಚಹಾ ಕುಡಿದು ಹೋಗಿರುವುದು ಬಿಟ್ಟರೆ ಯಾರಿಂದಲೂ ನಯಾ ಪೈಸೆ ಪಡೆದವನಲ್ಲ. ಬೇಕಾದರೆ ಈವರೆಗೆ ಚಹಾ ಕುಡಿದ ಹಣವನ್ನು ಇಲ್ಲೇ ಕೊಟ್ಟು ಹೋಗುತ್ತೇನೆ ಬಡವರಿಗೆ ಕೆಲಸ ಮಾಡಿಕೊಡಿ. ಲಂಚಕ್ಕೆ ಬಾಯಿ ಬಿಟ್ಟು ಅವರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು. ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ಕೆಲವೊಂದು ಕಡತಗಳಿಗೆ ಕಾನೂನು ತೊಡಕಿನ ವಿಷಯವನ್ನು ಮುಂದಿಟ್ಟು ಮಾತನಾಡಿದ ತಹಶೀಲ್ದಾರ್ ಅವರು, ಆರೋಪಗಳಿಗೆ ಸಂಬಂಧಿಸಿ ಮೌನವಾಗಿಯೇ ಇದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರೂ ಏನೂ ಮಾತನಾಡದರೆ ಕಡಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ, ತಹಶೀಲ್ದಾರ್ ಅನಂತ ಶಂಕರ್, ಉಪ ತಹಶೀಲ್ದಾರ್‌ಗಳಾದ ಮನೋಹರ ಕೆ.ಟಿ, ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.