ಕಾಂಗ್ರೆಸ್ ಪಕ್ಷದ ಎಸ್ಪಿ ಕಚೇರಿ ಚಲೋಗೆ ಹೆದರಿ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ, ಇದು ಸರ್ಕಾರದ ಹೇಡಿತನದ ಕ್ರಮ ➤‌ ಶೌವಾದ್ ಗೂನಡ್ಕ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 23. ವಿಪಕ್ಷ ನಾಯಕ ಸಿದ್ದರಾಮಯ್ಯರವರ ಕಾರಿನ ಮೇಲೆ ಮೊಟ್ಟೆ ಎಸೆತವನ್ನು ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಪಕ್ಷವು ಕರೆ ನೀಡಿದ್ದ ಎಸ್.ಪಿ.ಕಚೇರಿ ಚಲೋ ಪ್ರತಿಭಟನೆಗೆ ಹೆದರಿ ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದು, ಇದು ಸರ್ಕಾರದ ಹೇಡಿತನದ ಕ್ರಮ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕರವರು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆ. ರಾಜ್ಯ ಬಿ.ಜೆ.ಪಿ ಸರ್ಕಾರವು ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕೊಡಗಿನಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಿ.ಜೆ.ಪಿ.ಯು ದ್ವೇಷದ ರಾಜಕಾರಣಕ್ಕೆ ಕೈ ಹಾಕಿದೆ ಎಂದು ಆರೋಪಿಸಿದ್ದಾರೆ. ವಿಪಕ್ಷ ನಾಯಕರಿಗೆ ಸೂಕ್ತ ಭದ್ರತೆಯನ್ನು ನೀಡಲು ವಿಫಲವಾದ ಕಾರಣ ಇಷ್ಟೆಲ್ಲ ಬೆಳವಣಿಗೆಗಳು ನಡೆದಿದೆ. ಬಿ.ಜೆ.ಪಿ. ಕಾರ್ಯಕರ್ತನ ಮೂಲಕ ಮೊಟ್ಟೆ ಎಸೆಯುವ ಕೆಲಸವನ್ನು ಮಾಡಿಸಿದ್ದ ಕೊಡಗಿನ ಇಬ್ಬರು ಬಿ.ಜೆ.ಪಿ ಶಾಸಕರುಗಳು ನಂತರ ಆತನನ್ನು ಕಾಂಗ್ರೆಸ್ಸಿಗ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಸತ್ಯ ಬಯಲಾಗುತ್ತಿದ್ದಂತೆಯೇ ಇದೀಗ ನಿಷೇಧಾಜ್ಞೆಯ ಮೂಲಕ ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಅಡಗಿಸಲು ಹೊರಟಿದ್ದಾರೆ. ಇವರ ಇಂತಹ ಬೆದರಿಕೆಯ ರಾಜಕಾರಣಕ್ಕೆ ಕಾಂಗ್ರೆಸ್ಸಿಗರು ಹೆದರುವುದಿಲ್ಲ. ಕೂಡಲೇ ನಿಷೇಧಾಜ್ಞೆಯನ್ನು ತೆರವುಗೊಳಿಸಿ ಪ್ರತಿಭಟನೆಗೆ ಅವಕಾಶ ನೀಡಬೇಕೆಂದು ಶೌವಾದ್ ಗೂನಡ್ಕರವರು ಆಗ್ರಹಿಸಿದ್ದಾರೆ. ರಾಜ್ಯ ಬಿ.ಜೆ.ಪಿ. ಸರ್ಕಾರವು ಅಭಿವೃದ್ಧಿಯ ರಾಜಕಾರಣ ಮಾಡದೆ ಧರ್ಮ ಆಧಾರಿತವಾದ ರಾಜಕಾರಣವನ್ನು ಮಾಡುತ್ತಿದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿ.ಜೆ.ಪಿಯು ಧರ್ಮಗಳ ನಡುವೆ ಕಂದಕ ಸೃಷ್ಠಿಸಿ ಮತಗಳನ್ನು ಪಡೆಯುವ ಹುನ್ನಾರದಲ್ಲಿದೆ ಎಂದವರು ಆರೋಪಿಸಿದ್ದಾರೆ.

Also Read  ಬಿ.ಸಿ.ರೋಡ್: ಕಾರು-ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top