(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕರೆಯಲಾಗುವ ಆಝಾನ್‌ನಲ್ಲಿ ಇರುವ ವಿಚಾರಗಳನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಲು ಹೈಕೋರ್ಟ್ ನಿರಾಕರಿಸಿದೆ.
ನಗರದ ನಿವಾಸಿ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪ್ರತಿ ದಿನ 5 ಬಾರಿ ಅಝಾನ್ ಕೂಗುವುದರಿಂದ ಬೇರೆ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಆಝಾನ್‌ನಲ್ಲಿ ಇರುವ ವಿಚಾರಗಳು, ಬೇರೆ ಧರ್ಮಗಳ ಅನುಯಾಯಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಅರ್ಜಿದಾರರ ವಾದವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಭಾರತದ ಸಂವಿಧಾನದ ಪ್ರಕಾರ 25 ಮತ್ತು 26ನೇ ವಿಧಿಗಳು ನಮ್ಮ ದೇಶದ ಸಂಸ್ಕೃತಿಯ ಸಹನಶೀಲತೆಯ ಮೂರ್ತರೂಪವಾಗಿವೆ. 25(1)ರ ವಿಧಿಯು ಪ್ರತೀ ವ್ಯಕ್ತಿಯೂ ತಮ್ಮ ತಮ್ಮ ಧರ್ಮಗಳಲ್ಲಿ ಶ್ರದ್ಧೆ ಇರಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಪೀಠವು ಹೇಳಿದೆ.