ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 22. ಪತಿಯೋರ್ವ ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆಯ ಸಮೀಪ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಹಾಗೂ ಆಕೆಯ ಪತಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೂಲತಃ ಸೊರಬ ನಿವಾಸಿಯಾಗಿರುವ ಪೂರ್ಣಿಮಾ ಆಚಾರ್ಯ ಅವರನ್ನು ಕಳೆದ ಹದಿನಾರು ವರ್ಷಗಳ‌ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯರಿಗೆ ವಿವಾಹ ಮಾಡಿಕೊಡಲಾಗಿತ್ತು. ಟಿಪ್ಪರ್ ಚಾಲಕನಾಗಿರುವ ರವಿ ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಇಲ್ಲಿಯೇ ನೆಲೆಸಿದ್ದರು. ಬಳಿಕ ಗಂಡನ ಕುಡಿತದ ಚಟದಿಂದ ಬೇಸತ್ತು ಆತನಿಂದ ದೂರವಾಗಿ ಹಲವು ಸಮಯದಿಂದ ತವರು ಮನೆಯಲ್ಲೇ ವಾಸಿಸುತ್ತಿದ್ದ ಪತ್ನಿಯು ಸೀಮಂತದಲ್ಲಿ ಭಾಗಿಯಾಗಲೆಂದು ಗಂಡನ ಮನೆಗೆ ಬಂದಿದ್ದ ಸಂದರ್ಭ ಕುಡಿದ ಮತ್ತಿನಲ್ಲಿ ಪತಿ, ಮೊದಲು ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತಿಯಾದ ಕುಡಿತದ ಚಟ ಹೊಂದಿರುವ ರವಿ ಕುಡಿದು ಆಗಾಗ್ಗೆ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಮನೆಯವರು ಮಾತುಕತೆ ನಡೆಸಿದ ಬಳಿಕ ಪತಿಯಿಂದ‌ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು. ನಿನ್ನೆ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕಬ್ಬಿಣದ ಪ್ಲೇಟ್ ನಿಂದ ಪತ್ನಿಯ ಮೇಲೆ ಹಲ್ಲೆಗೈದು ರವಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Also Read  ದ.ಕ ಜಿಲ್ಲೆಯ ವಿವಿಧ ಕಡೆ ಕಳ್ಳತನ ಪ್ರಕರಣ ➤ ಕಡಬ ಮೂಲದ ಆರೋಪಿ ಕೊನೆಗೂ ಅರೆಸ್ಟ್..!

error: Content is protected !!
Scroll to Top