ನೆಲ್ಯಾಡಿ: ನಿಲ್ಲಿಸಿದ್ದ ಸ್ಕೂಟಿ ಕದ್ದು ಪೊಲೀಸರ ಅತಿಥಿಯಾದ ಕೇರಳ ಮೂಲದ ಕೊಲೆ ಆರೋಪಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 17. ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಕೇರಳದ ಕೋಯಿಕ್ಕೋಡ್‌ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದು ಎಂಜೀರದಲ್ಲಿ ಮಹಿಳೆಯೋರ್ವರ ಸ್ಕೂಟಿ ಕದ್ದು ಪರಾರಿಯಾಗುತ್ತಿದ್ದ ವೇಳೆ ಗುಂಡ್ಯದಲ್ಲಿ ಧರ್ಮಸ್ಥಳ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.

ಪೊಲೀಸರ ವಶವಾದ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ವಿನೀಶ್(21) ಎಂದು ಗುರುತಿಸಲಾಗಿದೆ. ರೆಖ್ಯ ಸಮೀಪದ ಎಂಜೀರ ಮಲ್ನಾಡ್ ಹೋಟೆಲ್ ಸಮೀಪ ಮಹಿಳೆಯೋರ್ವರು ಕೀಯನ್ನು ಸ್ಕೂಟಿಯಲ್ಲಿಯೇ ಬಿಟ್ಟು ಹೋಟೆಲ್‌ಗೆ ಹೋಗಿದ್ದು, ಇದೇ ವೇಳೆ ಅಲ್ಲಿಗೆ ಬಂದ ವಿನೀಶ್ ಸ್ಕೂಟಿಯನ್ನು ಕದ್ದು ಗುಂಡ್ಯ ಕಡೆಗೆ ಪರಾರಿಯಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಗುಂಡ್ಯ ಪೊಲೀಸ್ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದ್ದು, ಅಲ್ಲಿ ಆತನನ್ನು ಸ್ಕೂಟಿ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ನಡುವೆ ಮಹಿಳೆಯು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದು, ಮೇಲ್ನೋಟಕ್ಕೆ ಈತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು ವಿಚಾರಣೆ ವೇಳೆ ಮಲಪ್ಪುರಂ ಜಿಲ್ಲೆಯವನೆಂದೂ, ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದು ಆ. 16ರಂದು ಧರ್ಮಸ್ಥಳಕ್ಕೆ ಆಗಮಿಸಿದ ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ? ಉಪ್ಪಿನಂಗಡಿ: ಅರಣ್ಯ ವೀಕ್ಷಕ ಆತ್ಮಹತ್ಯೆ

ಕೊಲೆ ಪ್ರಕರಣದ ಆರೋಪಿಯಾಗಿರುವ ವಿನೀಶ್ ಮಾನಸಿಕ ಅಸ್ವಸ್ಥನಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಈತ ರೈಲು ಹತ್ತಿ ಮಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಈತ ಎಂಜೀರಕ್ಕೆ ಬಂದು ಸ್ಕೂಟಿ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

error: Content is protected !!
Scroll to Top