(ನ್ಯೂಸ್ ಕಡಬ) newskadaba.com ಪೂಂಜಾಲಕಟ್ಟೆ, ಆ. 15. ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮವು ಪೂಂಜಾಲಕಟ್ಟೆ ಜಂಕ್ಶನ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇಮಾಮ್ಸ್ ಕೌನ್ಸಿಲ್ ಕರಾವಳಿ ಪ್ರಾಂತ್ಯ ಅಧ್ಯಕ್ಷ ಜಾಪರ್ ಸಾಧಿಕ್ ಫೈಝಿ, ಈ ಅಮೃತ ಮಹೋತ್ಸವದ ಸಂಭ್ರಮವು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಪ್ರಭುತ್ವಕ್ಕೆ ಅಮೃತವಾದರೆ ಭ್ರಷ್ಟರಿಗೆ , ಕೊಲೆಗಡುಕರಿಗೆ, ಗೂಂಡಾಗಳಿಗೆ , ಅಶಾಂತಿ ಹರಡುವವರಿಗೆ ಉತ್ಸವವಾಗಿದೆ. ದೇಶದ ಅಲ್ಪಸಂಖ್ಯಾತರಿಗೆ, ದಲಿತರಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾವಂತರಿಗೆ ಭವಿಷ್ಯದ ಬದುಕಿನ ಬಗ್ಗೆ ದೊಡ್ಡ ಆತಂಕವಾಗಿದೆ. ಜಾತ್ಯಾತೀತ ಪ್ರಜಾಪ್ರಭುತ್ವ ಸಂವಿಧಾನದ ಮೌಲ್ಯಗಳೊಂದಿಗೆ ಸ್ವಾಭಿಮಾನದಿಂದ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಭೀತಿಯ ವಾತಾವರಣ ದೇಶಾದ್ಯಂತ ಕಂಡುಬರುತ್ತಿದೆ.
ಭಾರತ ದೇಶದ ಈಗಿರುವ ಸಂವಿಧಾನವನ್ನು ಬುಡಮೇಲುಗೊಳಿಸಿ ಮನುವಾದಿ ಬ್ರಾಹ್ಮಣ್ಯ ಹಿಂದುತ್ವದ ಸಂವಿಧಾನವನ್ನು ಜಾರಿಗೊಳಿಸುವ ಪ್ರಯತ್ನ ಬಹಿರಂಗವಾಗಿ ಸಕ್ರಿಯವಾಗಿ ನಡೆಯುತ್ತಿದೆ. ಅದಕ್ಕಾಗಿ ಸಂವಿಧಾನಿಕ ಸಂಸ್ಥೆಗಳನ್ನು ಸೌಕರ್ಯಗಳನ್ನು ಆಡಳಿತ ಸರಕಾರ ದುರ್ಬಳಕೆ ಮಾಡುತ್ತಿದೆ. ಅನ್ಯಾಯದ ವಿರುದ್ದ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಆಡಳಿತ ಸರಕಾರ ಧಮನಿಸುತ್ತಿದೆ. ಇದು ದೇಶದ ಭವಿಷ್ಯಕ್ಕೆ ಬಹುದೊಡ್ಡ ಬೆದರಿಕೆ ಸವಾಲು ಆಗಿದೆ. ದೇಶದ ಸಂವಿಧಾನದ ಮೌಲ್ಯಗಳ ಸಂರಕ್ಷಣೆಗಾಗಿ ಪ್ರತಿಯೊಬ್ಬ ಪ್ರಜೆಯು ಹಿಂದುತ್ವ ರಾಷ್ಟ್ರ ಸ್ಥಾಪಿಸುವ ಕೋಮುವಾದಿ ಸಂಘಪರಿವಾರ ಶಕ್ತಿಗಳ ವಿರುದ್ದ ಒಟ್ಟಾಗಿ ಹೋರಾಟ ಮಾಡುವ ಪ್ರತಿಜ್ಞೆಯನ್ನು ಮಾಡಬೇಕು. ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿ ನಿಂತು ಧೀರೋದಾತ್ತ ಹೋರಾಟ ಮಾಡಿ ಹುತಾತ್ಮರಾದ ಸಹಸ್ರಾರು ಉಲಮಾಗಳ ಇತಿಹಾಸ ನಮಗೂ ಮಾದರಿಯಾಗಿದೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಈ ಸಂದೇಶವನ್ನು ದೇಶಾದ್ಯಂತ ನೀಡುತ್ತಾ ಜನರಲ್ಲಿ ರಾಷ್ಟ್ರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು. ಉಸ್ಮಾನ್ ಸಅದಿ ಧ್ವಜಾರೋಹಣ ನಿರ್ವಹಿಸಿದರು. ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಣಕಜೆ ಜುಮ್ಮಾ ಮಸೀದಿಯ ಅಧ್ಯಕ್ಷ ಡಾಕ್ಟರ್ ನಿಯಾಝ್, ಪಾಂಡವರಕಲ್ಲು ಮಸೀದಿಯ ಅಧ್ಯಕ್ಷ ಅಥಾವುಲ್ಲಾ, ಮಾಲಾಡಿಪಲಿಕ್ಕೆ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್, ಪಾಪ್ಯುಲರ್ ಫ್ರಂಟ್ ಮಡಂತ್ಯಾರು ವಲಯ ಅಧ್ಯಕ್ಷ ಬಿ.ಎಮ್ ಅಬ್ದುಲ್ ರಝ್ಝಾಖ್, ಮಡಂತ್ಯಾರು ಪಂಚಾಯತ್ ಸದಸ್ಯ ಮುಹಮ್ಮದ್ ಹನೀಫ್ ಮತ್ತು ಅಬ್ದುಲ್ ಖಾಲಿಕ್ ಮುಸ್ಲಿಯಾರ್ ಶುಭ ಹಾರೈಸಿದರು. ಇಮಾಮ್ಸ್ ಕೌನ್ಸಿಲ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹಾರಿಸ್ ಹನೀಫಿ ಸ್ವಾಗತಿಸಿದರು.