ಎಸಿಬಿ ರಚನೆಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ನೀಡಿ ಆದೇಶ ಹೊರಡಿಸಿದ ಹೈಕೋರ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 11. ಎಸಿಬಿ ರಚನೆ ಪ್ರಶ್ನಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದ್ದು, ಎಸಿಬಿ ರಚನೆ ಆದೇಶವನ್ನು ರದ್ದು ಮಾಡಿ, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಆದೇಶಿಸಿದೆ.

ಈ ಕುರಿತು ಚಿದಾನಂದ ಅರಸ್, ಬೆಂಗಳೂರು ವಕೀಲರ ಸಂಘ ಹಾಗೂ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ.‌ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ರದ್ದುಪಡಿಸಿದೆ. ಅಲ್ಲದೇ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡಿ, ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರುಸ್ಥಾಪಿಸಿದೆ. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗಬಾರದು. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು ಎಂದು ಕೋರ್ಟ್ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಿದೆ. ಲೋಕಾಯುಕ್ತಕ್ಕೆ ಮೂರು ವರ್ಷದ ಅವಧಿಗೆ ಅಧಿಕಾರಿಗಳ ನೇಮಕವಾಗಬೇಕು. ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕೇ ಹೊರತು ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ.

Also Read  ಬಸ್ಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಪ್ರಕರಣ ದಾಖಲು ➤ ಸಭೆಯಲ್ಲಿ ಉಡುಪಿ DC ಎಚ್ಚರಿಕೆ

error: Content is protected !!
Scroll to Top