(ನ್ಯೂಸ್ ಕಡಬ) newskadaba.com ಮಂಗಳೂರು, ಆ. 11. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಬಂಧನವಾಗಿದೆ ಎಂದು ತನಿಖೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಈ ಕುರಿತು ದ.ಕ ಜಿಲ್ಲಾ ಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ, ಇಂದು ಬೆಳಗ್ಗೆ ಪ್ರಮುಖ ಹಂತಕರಾದ ಸುಳ್ಯದ ಸಿಯಾಬ್(33) , ರಿಯಾಝ್ ಅಂಕತಡ್ಕ( 27), ಸುಳ್ಯದ ಬಷೀರ್(29) ಬಂಧಿಸಲಾಗಿದೆ ಎಂದು ಹೇಳಿದರು. ಆರೋಪಿಗಳನ್ನು ತಲಪಾಡಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಯಾವ ಕಡೆ ಇದ್ರು, ಯಾರು ಆಶ್ರಯ ಕೊಟ್ಟಿದ್ದಾರೆ ಎಂಬುವುದರ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದರು. ಯಾವ ಉದ್ದೇಶಕ್ಕೆ ಪ್ರವೀಣ್ ಕೊಲೆಯಾಗಿದೆ ಎಂಬುವುದನ್ನು ತನಿಖೆ ಮಾಡುತ್ತೇವೆ ಎಂದರು. ಮೂರು ಜನರ ಸಮಗ್ರ ತನಿಖೆ ನಡೆಸಿ ಎನ್.ಐ.ಎ ಗೆ ಪ್ರಕರಣ ವಹಿಸುತ್ತೇವೆ. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು. ಅಧಿಕಾರಿ ತಂಡಕ್ಕೆ ಬಹುಮಾನವನ್ನೂ ಘೋಷಿಸಲಾಗುತ್ತೆ. ಆರೋಪಿಗಳಿಗೆ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಜೊತೆ ಲಿಂಕ್ ಇರುವುದು ಗೊತ್ತಾಗಿದೆ. ತನಿಖೆಯಲ್ಲಿ ಈ ಬಗ್ಗೆ ಸಾಬೀತುಪಡಿಸಬೇಕಾಗಿದೆ. ಕೃತ್ಯ ನಡೆಸಿ ಕಾಸರಗೋಡಿನ ಮಸೀದಿಗೆ ಮೊದಲು ಹೋಗಿದ್ದಾರೆ. ತನಿಖೆಯಲ್ಲಿ ಎಲ್ಲಾ ವಿಚಾರವನ್ನು ಹೊರ ತರುತ್ತೇವೆ. ಬ್ಲ್ಯಾಕ್ ಸ್ಪ್ಲೆಂಡರ್ ಬೈಕ್ ಹಾಗೂ ಒಂದು ಕಾರನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ. ಮುಂದೆ ಗಂಭೀರ ಪ್ರಕರಣ ಇದ್ದರೆ ವಾರೆಂಟ್ ಇಶ್ಯೂ ಮಾಡಿ ಆಸ್ತಿ ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರ ಬಂಧನ ಮಾಡಲ್ಲ. ಆದ್ರೆ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದರು.