(ನ್ಯೂಸ್ ಕಡಬ) newskadaba.com ಹಾಸನ, ನ.15. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಪತ್ನಿಯನ್ನು ಕೊಲೆಗೈದು ತನ್ನ ಇಬ್ಬರು ಮಕ್ಕಳೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ಚನ್ನರಾಯಪಟ್ಟಣದ ಗುಣಶೆಟ್ಟಿ ಎಂಬಲ್ಲಿ ಮಂಗಳವಾರದಂದು ನಡೆದಿದೆ.
ಕೊಲೆಯಾದ ಮಹಿಳೆಯನ್ನು ಚನ್ನರಾಯಪಟ್ಟಣ ನಿವಾಸಿ ಮಂಜೇಗೌಡ ಎಂಬಾತನ ಪತ್ನಿ ಸುಮಾ(29) ಎಂದು ಗುರುತಿಸಲಾಗಿದೆ. ಮಂಜೇಗೌಡ ಹಾಗೂ ಕೊಲೆಯಾಗಿರುವ ಸುಮಾ ಒಂದೇ ಊರಿನವರಾಗಿದ್ದು, 2004ರಲ್ಲಿ ಮದುವೆಯಾಗಿತ್ತು.
ನಂತರದ ದಿನಗಳಲ್ಲಿ ಮಂಜೇಗೌಡ ತನ್ನ ಹೆಂಡತಿಯ ಬಗ್ಗೆ ಸಂಶಯ ಪಡುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದ್ದು, ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆದು ಮಂಜೇಗೌಡ ಮತ್ತು ಸುಮಾ ಅವರನ್ನು ಕೆಲ ತಿಂಗಳ ಹಿಂದೆ ಒಂದು ಮಾಡಲಾಗಿತ್ತು. ಸೋಮವಾರದಂದು ಗಲಾಟೆ ನಡೆದು ಮಂಜೇಗೌಡ ತನ್ನ ಪತ್ನಿ ಸುಮಾರನ್ನು ಕೊಲೆ ಮಾಡಿ ಇಬ್ಬರು ಮಕ್ಕಳೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.
ಮೃತ ಸುಮಾಳ ಅಣ್ಣ ಸುರೇಶ್ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.