ವಿಟ್ಲ: ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ತಲೆ ಬುರುಡೆಯ ಗುರುತು ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 09. ಇಲ್ಲಿನ‌ ನೆಕ್ಕರೆಕಾಡು ಎಂಬಲ್ಲಿನ ಗುಡ್ಡವೊಂದರಲ್ಲಿ ಪತ್ತೆಯಾದ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.

ಮೃತ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65) ಎಂದು ಗುರುತಿಸಲಾಗಿದೆ. ನಾಗೇಶ್ ಗೌಡರವರು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ. 08ರಂದು ಸಾಯಂಕಾಲ ಗುಡ್ಡಕ್ಕೆ ಸೊಪ್ಪು ತರಲೆಂದು ತೆರಳಿದ ಜನರಿಗೆ ತಲೆಬುರುಡೆ, ಎಲುಬು ಕಾಣಸಿಕ್ಕಿದ್ದು, ಅವರು ಮರಳಿಬಂದು ಮನೆಮಂದಿಗೆ ವಿಚಾರ ತಿಳಿಸಿ, ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ನಾಪತ್ತೆ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ್ದು, ಈ ವೇಳೆ ನಾಪತ್ತೆಯಾದ ನಾಗೇಶ್ ರವರ ಮಗನನ್ನು ಸ್ಥಳಕ್ಕೆ ಕರೆಸಿದ್ದರು. ಈ ವೇಳೆ ಅವರು ನಾಪತ್ತೆಯಾಗುವ ದಿನ ಅವರು ಧರಿಸಿದ್ದ ಬಟ್ಟೆ ಹಾಗೂ ತಲೆಬುರುಡೆ ಸಮೀಪ ಪತ್ತೆಯಾಗಿದ್ದ ಬಟ್ಟೆಯ ಆಧಾರದಲ್ಲಿ ಅದು ನಾಗೇಶ್ ಗೌಡರದ್ದೇ ಎಂದು ಗುರುತು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗೇಶ್ ಗೌಡ ರವರು ನೆಕ್ಕರೆ ಕಾಡು ರಸ್ತೆಯಾಗಿ ಮನೆಯೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

Also Read  ಸಂತ ಸೇವಾಲಾಲ್ ಆದರ್ಶ ಅಳವಡಿಸಲು ಕರೆ

error: Content is protected !!
Scroll to Top