ಮಂಗಳೂರು- ಗಲ್ಪ್ ರಾಷ್ಟ್ರದ ನಡುವಿನ ವಿಮಾನಯಾನ ದುಬಾರಿ ➤ ಸಂಕಷ್ಟದಲ್ಲಿ ಕರಾವಳಿಗರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 09. ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದುಬಾರಿಯಾಗಿರುವ ಹಿನ್ನೆಲೆ ಕರಾವಳಿಗರು ಕಂಗಾಲಾಗಿದ್ದಾರೆ. ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಮಂಗಳೂರು, ಕಾಸರಗೋಡು ಮೂಲದ ಎನ್ಆರ್ ಐ ಗಳು ನೇರವಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ನೇರವಾಗಿ ಟ್ಯಾಕ್ಸಿ ಮೂಲಕ ಊರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ನೆರೆ ರಾಜ್ಯವಾದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಮಂಗಳೂರಿನ ವಿಮಾನ ದರ ದುಪ್ಪಟ್ಟಾಗಿದ್ದು, ಮಂಗಳೂರಿನಿಂದ ವಿಮಾನಯಾನ ದಿನೇದಿನೇ ದುಬಾರಿಯಾಗುತ್ತಿರುವುದರಿಂದ ಕರಾವಳಿಯ ಅನಿವಾಸಿಗರು ಪಕ್ಕದ ಕಣ್ಣೂರಿನ ಮೊರೆ ಹೋಗುತ್ತಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಅಬುಧಾಬಿ- ಕಣ್ಣೂರು ವಿಮಾನ ದರ 9,700 ರೂ, ಅದೇ ಮಂಗಳೂರಿಗೆ ಬರೋದಾದರೆ 18,350ರೂ. ಹೀಗೆ ದುಪ್ಪಟ್ಟು ಪ್ರಮಾಣದಲ್ಲಿ ಟಿಕೇಟು ದರ ವಿಧಿಸಲಾಗುತ್ತಿದೆ. ದಮ್ಮಾಮಿನಿಂದ ಮಂಗಳೂರಿಗೆ ತಡೆರಹಿತ ಪ್ರಯಾಣ ಮಾಡಬೇಕಾದರೆ 50 ಸಾವಿರ ಭರಿಸಬೇಕಾಗುತ್ತದೆ. ಇದು ಇತರ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ದುಬಾರಿ ಎಂದು ಅನಿವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಅನಿವಾಸಿ ಭಾರತೀಯರ ಸತತ ಹೋರಾಟದ ಫಲವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆಯೆತ್ತಿದೆಯಾದರೂ, ಇದೀಗ ಅದು ಕೈಗೆಟುಕದ ತುತ್ತಾಗಿಬಿಟ್ಟಿದೆ. ಕೋವಿಡ್ ಬಳಿಕ ಅನಿವಾಸಿ ಕನ್ನಡಿಗರು ಬಹಳ ಸಂಕಷ್ಟಕ್ಕೀಡಾಗಿದ್ದು, ಬೆಲೆಯೇರಿಕೆಯಿಂದ ಆರ್ಥಿಕವಾಗಿ ತೊಂದರೆಗೆ ಒಳಗಾಗಬೇಕಾಗಿ ಬಂದಿದೆ. ಆದರೂ ಈ ಬಗ್ಗೆ ಸಚಿವರು, ಸಂಸದರು ಗಮನ ಹರಿಸುತ್ತಿಲ್ಲ ಎಂದು ಕರಾವಳಿಯ ಅನಿವಾಸಿಗರು ಅಳಲನ್ನು ತೋಡಿಕೊಂಡಿದ್ದಾರೆ.

Also Read  ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಐವರಿಂದ ಅತ್ಯಾಚಾರ ➤ ಪ್ರಕರಣ ತಡವಾಗಿ ಬೆಳಕಿಗೆ ➤ ಗ್ರಾ.ಪಂ. ಸಿಬ್ಬಂದಿ ಸಹಿತ ಮೂವರು ಪೊಲೀಸ್ ವಶಕ್ಕೆ

error: Content is protected !!
Scroll to Top