ಮಂಗಳೂರು: ನಾಲ್ವರ ಹಂತಕ ಪ್ರವೀಣ್ ಬಿಡುಗಡೆಗೆ ಸಿದ್ದತೆ ➤ ಸಂತ್ರಸ್ತರಿಂದ ಆಕ್ಷೇಪ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 05. 1994ರಲ್ಲಿ ನಗರದ ಹೊರವಲಯದ ವಾಮಂಜೂರಿನಲ್ಲಿ ಬೆಚ್ಚಿಬೀಳಿಸಿದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಅಪರಾಧಿಗೆ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂತ್ರಸ್ತ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಪ್ರವೀಣ್, ಮೂಲತಃ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದಾನೆ. ಈತ 1994ರ ಫೆಬ್ರವರಿ 23 ರಂದು ರಾತ್ರಿ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಮನೆಯಲ್ಲಿ ಮಲಗಿದ್ದ ಸಂದರ್ಭ ಬರ್ಬರವಾಗಿ ಹತ್ಯೆಗೈದು ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಈ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಪ್ರವೀಣ್ ಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ್ದು, ಇದನ್ನು ಹೈಕೋರ್ಟ್ ಮತ್ತು 2003 ರಲ್ಲಿ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದನು. ಈ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಈ ನಡುವೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಂದಿದ್ದ ಮೂವರ ಗಲ್ಲು ಶಿಕ್ಷೆಯ ರದ್ದು ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನೇ ಆಧಾರವಾಗಿಟ್ಟ ಪ್ರವೀಣ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಸುಪ್ರೀಂಕೋರ್ಟ್ ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.‌ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಪ್ರವೀಣ್ ಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಸಂತ್ರಸ್ತ ಕುಟುಂಬದವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಮಂಗಳೂರು: ಅಕ್ರಮ ಗಾಂಜಾ ಮಾರಾಟ ➤ ಮೆಡಿಕಲ್ ವಿದ್ಯಾರ್ಥಿಗಳು ಅರೆಸ್ಟ್

error: Content is protected !!
Scroll to Top