(ನ್ಯೂಸ್ ಕಡಬ) newskadaba.com ಸುಳ್ಯ, ಆ.02. ತಾಲೂಕಿನಲ್ಲಿ ವಾರದ ಅಂತರದಲ್ಲಿ ನಡೆದಂತಹ ಎರಡು ಭಿನ್ನ ಕೋಮಿನ ಯುವಕರ ಕೊಲೆಯ ನಂತರ ಕೋಮು ದ್ವೇಷದಿಂದ ಹೊತ್ತಿ ಉರಿಯುತ್ತಿದ್ದ ಕರಾವಳಿಯಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಸೋಮವಾರದಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಎಂಬಲ್ಲಿ ನಡೆದಿದೆ.
ಸೋಮವಾರ ಸಂಜೆ ಸುಳ್ಯ ತಾಲೂಕಿನ ಹಲವೆಡೆ ಭಾರೀ ಮಳೆ ಸುರಿದ ಪರಿಣಾಮ ಹರಿಹರ ಪಲ್ಲತ್ತಡ್ಕದಲ್ಲಿನ ಸೇತುವೆಯ ಬಳಿ ಮರದ ದಿಮ್ಮಿಗಳು ರಾಶಿ ಬಿದ್ದಿದ್ದು, ಮರ ತೆರವು ಕಾರ್ಯಾಚರಣೆಗಾಗಿ ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯೋರ್ವರ ಜೆಸಿಬಿ ವಾಹನಗಳನ್ನು ತರಿಸಲಾಗಿತ್ತು. ಕಾರ್ಯಚರಣೆಯ ವೇಳೆ ಆಪರೇಟರ್ ಶರೀಫ್ ಕ್ರೇನ್ ನಿಂದ ಇಳಿದು ಹೊಳೆ ಪಕ್ಕದಲ್ಲಿ ನಿಂತಿದ್ದಾಗ ಮರದ ದಿಮ್ಮಿಯೊಂದು ಅಚಾನಕ್ಕಾಗಿ ತಾಗಿ ಧುಮ್ಮಿಕ್ಕಿ ಹರಿಯುತ್ತಿರುವ ನದಿಗೆ ಷರೀಫ್ ಬಿದ್ದಿದ್ದಾರೆ. ಈ ವೇಳೆ ಈಜಲು ಸಾಧ್ಯವಾಗದೇ ಮುಳುಗುತ್ತಿರುವುದನ್ನು ಕಂಡ ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ ಎಂಬ ಯುವಕ ಪ್ರಾಣಾಪಾಯವನ್ನು ಲೆಕ್ಕಿಸದೇ ಹೊಳೆಗೆ ಜಿಗಿದು ಶರೀಫ್ ನನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಊರಿನ ಇತರರು ಸೇರಿ ಶರೀಫ್ ನನ್ನು ಮೇಲಕ್ಕೆತ್ತಿದ್ದಾರೆ.
ತುಂಬಿ ಹರಿಯುತ್ತಿದ್ದ ನದಿಗೆ ಧುಮುಕಿದ ಸೋಮಶೇಖರ್ ಕಟ್ಟೆಮನೆಯವರ ಸಾಹಸ, ಹಾಗೂ ಜಿಲ್ಲೆಯಲ್ಲಿನ ಕೋಮು ಉದ್ವಿಗ್ನ ಸ್ಥಿತಿಯಲ್ಲೂ ಮುಸ್ಲಿಂ ಯುವಕನನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆದಿರುವುದನ್ನು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ ಅವರು ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.