ಮಂಗಳೂರು: ಚುನಾವಣಾ ಗುರುತಿನ ಚೀಟಿಗೆ ಆಧಾರ್ ಜೋಡಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 02. ಜಿಲ್ಲೆಯ ಮತದಾರರು ಚುನಾವಣಾ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿಕೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಸೂಚಿಸಿದ್ದಾರೆ. ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿದ್ಯಾರ್ಥಿಗಳೊಂದಿಗೆ ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಗುರುತಿನ ಚೀಟಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಜೋಡಣೆ ಮಾಡಬೇಕಿದೆ. ಅದರಂತೆ ಎಪಿಕ್ ಕಾರ್ಡ್ ಹೊಂದಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ಪ್ರತಿಯೊಬ್ಬ ಮತದಾರರು ನಮೂನೆ 6-ಬಿಯಲ್ಲಿ ವೆಬ್‌ಸೈಟ್  http://www.nvsp.in/ ಮೂಲಕ ಅಥವಾ ವೋಟರ್ ಹೆಲ್ಪ್‌ಲೈನ್ ಆಪ್, ಗರುಡ ಆಪ್ ಹಾಗೂ ಬೂತ್ ಮಟ್ಟದ ಅಧಕಕಾರಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಅದನ್ನು ಜೋಡಣೆ ಮಾಡಬಹುದಾಗಿದೆ ಎಂದರು. ಆಧಾರ್ ಕಾರ್ಡ್ ಇಲ್ಲದಿದ್ದರೆ ನರೇಗಾ ಉದ್ಯೋಗ ಕಾರ್ಡ್, ಭಾವಚಿತ್ರ ಹೊಂದಿದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನ ಪಾಸ್ ಪುಸ್ತಕ, ಪ್ರಧಾನಮಂತ್ರಿ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ವಾಹನ ಪರವಾನಿಗೆ, ಪಾನ್ ಕಾರ್ಡ್, ಆರ್‌ಜಿಐ ಹಾಗೂ ಎನ್‌ಪಿಆರ್‌ನ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಪಿಂಚಣಿ ದಾಖಲಾತಿ, ಸರ್ವಿಸ್ ಗುರುತಿನ ಚೀಟಿ, ಶಾಸಕ ಹಾಗೂ ಸಂಸದರಿಂದ ಪಡೆದ ಅಧಿಕೃತ ಗುರುತಿನ ಚೀಟಿ ಹಾಗೂ ಯುಡಿಐಡಿ ಕಾರ್ಡ್ ದಾಖಲೆಯನ್ನು ನೀಡಿ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬಹುದು ಎಂದು ಡಿಸಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ, ದ.ಕ.ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಚುನಾವಣಾ ತಹಶೀಲ್ದಾರ್ ದಯಾನಂದ್, ಚುನಾವಣಾ ಶಾಖೆಯ ಅಧೀಕ್ಷಕ ಜೊಶ್ಲೀನ್ ಸ್ಟೀಫನ್ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group