(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.01. ಕುಕ್ಕೇ ಸುಬ್ರಹ್ಮಣ್ಯದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ಸಂಜೆಯಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಮನೆಯ ಹಿಂಬದಿಯ ಗುಡ್ಡ ಏಕಾಏಕಿ ಮನೆಯ ಮೇಲೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಕುಸುಮಾಧರರ ಮಕ್ಕಳಾದ ಶ್ರುತಿ(11) ಹಾಗೂ ಗಾನ(6) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಪೊಲೀಸ್ ಇಲಾಖೆ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಸೇರಿದಂತೆ ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮನೆಯಲ್ಲಿ ತಂದೆ, ತಾಯಿ, ಅಜ್ಜಿ ಹಾಗೂ ಮಕ್ಕಳಿಬ್ಬರಿದ್ದು, ರಾತ್ರಿ ವೇಳೆ ಏಕಾಏಕಿ ಶಬ್ದ ಕೇಳಿ ಮೂವರು ಹೊರಬಂದಿದ್ದು, ಮಕ್ಕಳಿಬ್ಬರು ಮನೆಯೊಳಗೆ ಬಾಕಿಯಾಗಿದ್ದಾರೆ. ಮಕ್ಕಳ ಮೇಲೆ ಗೋಡೆ ಕುಸಿದಿದ್ದು, ಮರುಕ್ಷಣವೇ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮಕ್ಕಳಿಬ್ಬರು ಮಣ್ಣುಪಾಲಾಗಿದ್ದರು. ತಕ್ಷಣವೇ ಜೆಸಿಬಿ ಮೂಲಕ ಶೋಧ್ ಕಾರ್ಯಾಚರಣೆ ಕೈಗೊಳ್ಳಲಾಯಿತಾದರೂ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ನ್ಯೂಸ್ ಕಡಬ’ಕ್ಕೆ ತಿಳಿಸಿದ್ದಾರೆ.