(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.01. ಕುಕ್ಕೇ ಸುಬ್ರಹ್ಮಣ್ಯದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳನ್ನು ಮಣ್ಣಿನಡಿ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ಸಂಜೆಯಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಮನೆಯ ಹಿಂಬದಿಯ ಗುಡ್ಡ ಏಕಾಏಕಿ ಮನೆಯ ಮೇಲೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಕುಸುಮಾಧರರ ಮಕ್ಕಳಾದ ಶ್ರುತಿ(11) ಹಾಗೂ ಗಾನ(6) ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಜಲಾವೃತವಾಗಿದ್ದು, ಜನಜೀವನ ತತ್ತರಗೊಂಡಿದೆ. ಸುಬ್ರಹ್ಮಣ್ಯ – ಪಂಜ ರಸ್ತೆಯ ಅಲ್ಲಲ್ಲಿ ಮರ ಬಿದ್ದಿದ್ದು, ರಸ್ತೆ ತಡೆ ಉಂಟಾಗಿದೆ.
ಹರಿಹರ, ಕೊಲ್ಲಮೊಗ್ರ, ಕಲ್ಮಕಾರು, ಬಾಳುಗೋಡು ಪ್ರದೇಶದಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. ಮಳೆಯ ಆರ್ಭಟಕ್ಕೆ ಹರಿಹರ ಪಲ್ಲತಡ್ಕ ಪ್ರದೇಶದಲ್ಲಿ ಸುಮಾರು 10ಕ್ಕೂ ಹೆಚ್ಚಿನ ಮನೆಗಳು ಜಲಾವೃತ ಗೊಂಡಿದ್ದು ಒಂದು ಬೈಕ್ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ಕುಕ್ಕೇ ಸುಬ್ರಹ್ಮಣ್ಯದಲ್ಲಿರುವ ಆದಿ ಸುಬ್ರಹ್ಮಣ್ಯ ದರ್ಪಣ ತೀರ್ಥ ಮಳೆಯ ನೀರಿಗೆ ಮುಳುಗಡೆಯಾಗಿದ್ದು, ಮಂಗಳವಾರ ನಾಗರ ಪಂಚಮಿ ದಿನವಾದುದರಿಂದ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸ್ಥಕ್ಕೆ ಬರದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.