ಎರಡು ಗಂಟೆಯ ಭಾರೀ ಮಳೆಗೆ ಮುಳುಗಿದ ಕುಕ್ಕೇ ಸುಬ್ರಹ್ಮಣ್ಯ..!! ➤ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡದಂತೆ ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 01. ಭಾರೀ ಮಳೆಗೆ ರಾಜ್ಯದ ಪ್ರತಿಷ್ಠಿತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೀರು ನುಗ್ಗಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸೇರಿ ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ನಾಳೆ ನಾಗರ ಪಂಚಮಿ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಉಳಿದಂತೆ ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಐನಕಿದು ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ. ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ಓಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡಶಂಖ ಎಂಬಲ್ಲಿ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ. ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಹರಿಹರ ಮೂಲಕ ಹರಿಯುವ ನದಿ ತುಂಬಿ ಹರಿಯುತ್ತಿದ್ದು, ಹರಿಹರ ಮುಖ್ಯ ಪೇಟೆ ಭಾಗಶಃ ಮುಳುಗಡೆಗೊಂಡಿದೆ. ಹರಿಹರದಿಂದ ಕೊಲ್ಲಮೊಗ್ರು, ಕಲ್ಮಕಾರು ಭಾಗಕ್ಕೆ ಸಂಚರಿಸುವ ರಸ್ತೆ ಹರಿಹರ ಪೇಟೆಯಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬಾಳುಗೋಡಿಗೂ ಸಂಪರ್ಕ ಕಡಿತವಾಗಿದೆ. ಸುಬ್ರಹ್ಮಣ್ಯ ಮಳೆಯಾಳ ಮಾರ್ಗವಾಗಿ ಹರಿಹರ ಈ ಭಾಗದ ಗುಂಡಡ್ಕ ಸೇತುವೆ ಮುಳುಗಡೆಗೊಂಡಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಯೊಳಗೆ ನೀರು ನುಗ್ಗಿ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವ್ರತಗೊಂಡಿವೆ, ಕೃಷಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಕೇಶವ ಭಟ್ ಕಟ್ಟರವರ ಮನೆಯ ಹಿಂದಿನ ಬರೆ ಜರಿದಿದೆ. ರಬ್ಬರ್ ಮರ ಉರುಳಿ ಬಿದ್ದಿದೆ. ಹರಿಹರ ಮುಖ್ಯ ಪೇಟೆ ಬಳಿಯ ವ್ಯಾಪಾರಸ್ಥರೋರ್ವರ ಅಂಗಡಿಗೆ ನೆರೆ ನೀರು ನುಗ್ಗಿ ದಾಸ್ತಾನಿಗೆ ಹಾನಿಯಾಗಿದೆ. ಹರಿಹರ ಪೇಟೆ ಭಾಗಶಃ ಮುಳುಗಡೆಗೊಂಡಿದೆ. ಹರಿಹರ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಕಾಂಪೌಂಡ್ ಜರಿದು ಹಾನಿಯಾಗಿದೆ. ಬಾಳುಗೋಡು ಕಟ್ಟೆಮನೆ ದಾಮೋದರ ಎಂಬವರ ಮನೆ ಹಿಂಬದಿ ಜರಿದು ಬಿದ್ದಿದೆ. ಹರಿಗರ ಎಲ್ಲಪಡ್ಕ ನಿವಾಸಿ ಮಹಾಲಿಂಗ ಕೆರೆಕ್ಕೋಡಿ ಮನೆ ಹಿಂಬದಿ ಜರಿದು ಬಿದ್ದು ಹಾನಿಯಾಗಿದೆ.

Also Read  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಅಂಕಿತಾ ರಾಜ್ಯಕ್ಕೆ ದ್ವಿತೀಯ

error: Content is protected !!
Scroll to Top