ವಿದ್ಯುತ್ ಶಾಕ್ ನಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ ➤ ಕಡಬ ತಹಶೀಲ್ದಾರ್ ಭೇಟಿ- ಸೂಕ್ತ ಕ್ರಮದ ಭರವಸೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 28. ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ತೆಗೆಯುವ ವೇಳೆ ಸಿಡಿಲು ಬಡಿದ ಪರಿಣಾಮ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಈ ಸಂಬಂಧ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಬೇಕೆಂದು ಮೃತ ಬಾಲಕನ ಸಂಬಂಧಿಕರು ಆಗ್ರಹಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಕಡಬ ತಹಶೀಲ್ದಾರ್‌, ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

ಸಿರಿಬಾಗಿಲು ಗ್ರಾಮದ ಅಡ್ಡಹೊಳೆ ಪುಲ್ಲೋಟ್ಟೆ ನಿವಾಸಿ ಮೋನುಚ್ಚ ಕೆ. ಹಾಗೂ ಬೀನಾ ದಂಪತಿ ಪುತ್ರ ರಾಫೀನ್ (14) ಎಂಬಾತ ಜು.27ರಂದು ಮಧ್ಯಾಹ್ನ ಮನೆಯಲ್ಲಿ ಚಾರ್ಜ್‌ಗೆಂದು ಇಟ್ಟಿದ್ದ ಮೊಬೈಲ್ ನ್ನು ತಪ್ಪಿಸುವ ವೇಳೆ ಸಿಡಿಲು ಬಡಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಬಳಿಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಬಿಟ್ಟು ಕೊಡಲಾಗಿತ್ತು. ಬಾಲಕ ಸಿಡಿಲು ಬಡಿದು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡಬೇಕು, ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯವರೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕೆಂಬ ಬೇಡಿಕೆಯಿಟ್ಟು ಮೃತದೇಹದ ಅಂತ್ಯಕ್ರಿಯೆ ನಡೆಸಿರಲಿಲ್ಲ. ಈ ಹಿನ್ನೆಲೆ ಸ್ಥಳಕ್ಕೆ ಕಡಬ ತಹಶೀಲ್ದಾರ್ ಅನಂತಶಂಕರ್ ರವರು ತೆರಳಿ ಮಾಹಿತಿ ಪಡೆದುಕೊಂಡು ಪ್ರಾಕೃತಿಕ ವಿಕೋಪದಡಿ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಇದಕ್ಕೆ ಪೂರಕವಾಗಿ ಸ್ಥಳದಲ್ಲಿದ್ದ ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ, ಸಚಿವರೂ ಆಗಿರುವ ಸುಳ್ಯ ಶಾಸಕ ಎಸ್.ಅಂಗಾರರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಿಡಿಲು ಬಡಿದು ಮೃತಪಟ್ಟಿರುವ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಸಚಿವ ಎಸ್.ಅಂಗಾರರವರು ಭರವಸೆ ನೀಡಿದರು.

Also Read  ಅಮಾಯಕರ ಹತ್ಯೆ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ► ಬೆಳ್ತಂಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ತಹಶೀಲ್ದಾರ್ ಜೊತೆ ಗ್ರಾಮಕರಣಿಕ ಸಂತೋಷ್, ಗ್ರಾಮ ಸಹಾಯಕ ಯುವರಾಜ್ ಉಪಸ್ಥಿತರಿದ್ದರು. ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ, ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೀತಾ, ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಸನ್ನಿ ಜಾನ್, ಎಂ.ಕೆ.ಪೌಲೋಸ್, ಕೊಂಬಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಿತಾ ಮತ್ತಿತರರು ಉಪಸ್ಥಿತರಿದ್ದರು.

Also Read  ಕಡಬ: ಅಕ್ರಮ ಮರಳುಗಾರಿಕೆಯ ವರದಿಗೆ ತೆರಳಿದ್ದ ಟಿವಿ ವರದಿಗಾರನಿಗೆ ಹಲ್ಲೆ ➤ ಕಡಬ ತಾಲೂಕು ಪತ್ರಕರ್ತರ ಸಂಘ ಖಂಡನೆ

 

error: Content is protected !!
Scroll to Top