ಮಂಗಳೂರು: ಪಬ್ ಮೇಲೆ ಯಾವುದೇ ದಾಳಿ ನಡೆದಿಲ್ಲ ➤ ಕಮಿಷನರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಪಬ್‌ ಮೇಲೆ ಯಾವುದೇ ದಾಳಿ ನಡೆದಿಲ್ಲ. ಈ ಸಂಬಂಧ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‍ ಹೇಳಿದ್ದಾರೆ.

ಪಬ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸೋಮವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸಂಘಟನೆಗೆ ಸೇರಿದ ಐದಾರು ಹುಡುಗರು ಬಂದು ಇಲ್ಲಿನ ಬೌನ್ಸರ್ ದಿನೇಶ್ ಅವರೊಂದಿಗೆ ಅಪ್ರಾಪ್ತ ಹುಡುಗ-ಹುಡುಗಿಯರು ಪಬ್‌ನಲ್ಲಿದ್ದಾರೆಂಬುದಾಗಿ ಹೇಳಿದ್ದಾರೆ. ಕೂಡಲೇ ಮ್ಯಾನೇಜರ್ ಒಳಗೆ ಹೋಗಿ ಪರಿಶೀಲಿಸಿದ್ದು, ಕಾಲೇಜೊಂದರ ವಿದ್ಯಾರ್ಥಿಗಳಿರುವುದನ್ನು ಗಮನಿಸಿ ತತ್‌ಕ್ಷಣ ಹೊರ ಹೋಗಲು ಹೇಳಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆಯ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ ಮತ್ತು ಯಾವುದೇ ದಾಳಿಯನ್ನೂ ಮಾಡಿಲ್ಲ. ಹೊರಗಿನಿಂದಲೇ ಮಾತನಾಡಿ ಹಿಂತಿರುಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸದ್ಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದ್ದು, ಹೊರಗಿನ ವ್ಯಕ್ತಿಗಳು ಬಂದು ಐಡಿ ಹಾಗೂ ಲೈಸೆನ್ಸ್‌ ಕೇಳಲು ಅವಕಾಶವಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಅಲ್ಲದೇ ಈ ಹಿಂದೆ ವೈರಲ್ ಆದ ಅಶ್ಲೀಲ ವೀಡಿಯೋ ಪ್ರಕರಣದ ವಿದ್ಯಾರ್ಥಿಗಳಿಗೂ ಈ ಘಟನೆಯ ವಿದ್ಯಾರ್ಥಿಗಳಿಗೂ ಯಾವುದೇ ಸಂಬಂಧ ಇಲ್ಲ. ಘಟನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

Also Read  ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಿಳಿನೆಲೆ ಒಕ್ಕೂಟದಿಂದ ನೆರವು

error: Content is protected !!
Scroll to Top