(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 26. ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದೀಗ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆ ಹಾಕಿ ಅಂತಹ ವ್ಯಕ್ತಿಗಳಿಗೆ ದಂಡವನ್ನು ವಿಧಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ನಾಲ್ಕು ಚಕ್ರದ ವಾಹನ ಹೊಂದಿರುವಂತಹ ಪಡಿತರ ಚೀಟಿದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಹಿಂದಿರುಗಿಸದೇ ಇದ್ದ ಕಾರಣ, ಇದೀಗ ಸರ್ಕಾರ ದಂಡ ವಿಧಿಸುತ್ತಿದೆ. ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಚೀಟಿ ಹೊಂದಿದ್ದರೆ 2019, ಸೆಪ್ಟೆಂಬರ್ 3ರೊಳಗೆ ವಾಪಾಸ್ ನೀಡುವಂತೆ ಸರಕಾರ ಸೂಚಿಸಿತ್ತು. ಆ ಬಳಿಕ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಆದರೂ ಯಾವುದೇ ನಾಲ್ಕು ಚಕ್ರ ಹೊಂದಿರುವ ಪಡಿತರ ಚೀಟಿದಾರರು ಕಾರ್ಡ್ ಹಿಂದಿರುಗಿಸಲಿಲ್ಲ. ಈ ಕಾರಣಕ್ಕೆ ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ನಾಲ್ಕು ಚಕ್ರಗಳ ವಾಹನ ಹೊಂದಿರುವಂತ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡ್ ದಾರರು ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಿ, ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವಿಧಿಸಲಾಗಿದೆ. ಈ ದಂಡ ಕಟ್ಟಿದ ಬಳಿಕ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.