ಆಲಂಕಾರು: ರಬ್ಬರ್ ಮರಕ್ಕೆ ಬೇರು ರೋಗ ► ರಬ್ಬರ್ ಬೆಳೆಗಾರರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕಿನ ಆಲಂಕಾರು  ಗ್ರಾಮದ ರೈತ ಪುಟ್ಟಣ್ಣ ಮುಗೇರ ರಬ್ಬರ್ ಮರದ ಬೇರಿನಲ್ಲಿ ರೋಗ ಕಾಣಿಸಿಕೊಂಡಿದ್ದು ಈ ಅಪರೂಪದ ರೋಗದಿಂದ  ರಬ್ಬರ್ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.

ಆಲಂಕಾರು ಗ್ರಾಮದ ಪುಟ್ಟಣ್ಣ ಮುಗೇರರವರ 600 ರಬ್ಬರ್ ಗಿಡಗಳ ಪ್ಲಾಂಟೇಶನ್‍ನಲ್ಲಿ ಈಗಾಗಲೇ ಸುಮಾರು  20ಕ್ಕೂ ಅಧಿಕ ಮರಗಳು ಈ ರೋಗಕ್ಕೆ ಬಲಿಯಾಗಿದೆ. ರೋಗಕ್ಕೆ ತುತ್ತಾದ ಮರ ಆರು ತಿಂಗಳಲ್ಲಿ ಯಾವುದೇ ರೀತಿಯ ಬದಲಾವಣೆಯು ಕಾಣುವುದಿಲ್ಲ. ಆರು ತಿಂಗಳು ಕಳೆದ ಬಳಿಕ ಮರದ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ರಬ್ಬರ್ ಮರದ ಬೇರಿಗೆ ಶಿಲೀಂದ್ರ ರೋಗ ಬರುವುದರಿಂದ ಮರದ ಬೇರು ಸಂಪೂರ್ಣ ಸತ್ತ ಬಳಿಕ ಕಾಂಡ ಒಣಗಿ ಮರದ ಎಲೆಗಳು ಉದುರಲಾರಂಭಿಸಿ  ಎರಡು ವಾರದೊಳಗೆ ಮರ  ಸಾಯುತ್ತದೆ.

ಈ ರೋಗವು ಒಂದು ಮರದಿಂದ ಇನ್ನೋಂದು ಮರಕ್ಕೆ ಬಹು ಬೇಗನೆ ಹರಡುತ್ತದೆ. ಈ ರೋಗವು ಹತ್ತು ವರ್ಷ ಮೇಲ್ಟಟ್ಟ ಗಿಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಉತ್ತಮ ಇಳುವರಿ ಪಡೆಯುವ ಸಮಯದಲ್ಲಿ ಈ ರೋಗ ಬಂದೆರಗಿರುವುದು ಬೆಳೆಗಾರರನ್ನು ಕಂಗಾಲುಗೊಳಿಸಿದೆ.

ಒಂದು ಮರ ಸತ್ತ ಆರು ತಿಂಗಳ ಬಳಿಕ ಮತ್ತೊಂದು ಮರ ರೋಗಕ್ಕೆ ಬಲಿಯಾಗುತ್ತದೆ. ಸತ್ತ ಮರದ 50ರಿಂದ 60 ಮೀಟರ್ ದೂರದ ಮರವನ್ನು ಈ ರೋಗ ಆಕ್ರಮಿಸಿಕೊಳ್ಳುತ್ತದೆ. ಆರಂಭದಲ್ಲಿ ರೋಗದ ಯಾವುದೇ ಲಕ್ಷಣ ಕಂಡು ಬಾರದಿರುವುದರಿಂದ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಬೆಳೆಗಾರನಿಗೆ ಒಂದು ಸವಾಲಾಗಿ ಪರಿಣಮಿಸಿದೆ.

Also Read  ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ - ಸಿಎಂ ಘೋಷಣೆ

ಇದೊಂದು ಶಿಲೀಂದ್ರ ರೋಗವಾಗಿದೆ. ಕಾಡುಗಳನ್ನು ನೆಲಸಮಗೊಳಿಸಿ ರಬ್ಬರ್ ಕೃಷಿ ಮಾಡಿದ ಪ್ರದೇಶದಲ್ಲಿ ಪ್ಲಾಂಟೇಶನ್ ಒಳಗಡೆ ಗುಂಡಿಗಳಿದ್ದಲ್ಲಿ ಹಳೆಯ ಬೃಹತ್ ಗಾತ್ರದ ಮರಗಳು ಮರದ ಬೇರುಗಳು ಮಣ್ಣಿನಡಿಯಲ್ಲಿ ಸಿಲುಕಿದ್ದ ಪ್ರದೇಶದಲ್ಲಿ ಈ ರೋಗವು ಹೆಚ್ಚಾಗಿ ಕಂಡು ಬರುತ್ತದೆ. ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಈ ರೋಗ ಕಂಡು ಬಂದಿದೆ. ರೋಗ ಬಾಧಿತ ಮರದ ಸುತ್ತ ಅಗೆದು ಬೇರೆ ಮರಕ್ಕೆ ಬೇರು ಅಂಟಿಕೊಳ್ಳದಂತೆ ಪ್ರಥಮ ಪ್ರಯತ್ನ ಮಾಡಬೇಕಾಗುತ್ತದೆ. ಟಿಲ್‍ಟ್ (Tilt) ಎಂಬ ಕೀಟನಾಶಕವನ್ನು ಒಂದು ಲೀಟರ್ ನೀರಿಗ 5 ಎಂ.ಎಲ್ ಹಾಕಿ ಮರದ ಸುತ್ತ ಸುರಿಯಬೇಕು. ಅಥವಾ ಎಂಡೋಫಿಲ್ (Endofil) ಎಂಬ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 10 ಎಂಎಲ್ ಬಳಸಿ ರೋಗ ಭಾದಿತ ಮರದ ಸುತ್ತ ಸುರಿದರೆ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುವುದು. ಪುತ್ತೂರು ತಾಲೂಕಿನಲ್ಲಿ ಕಂಡು ಬಂದಿರುವ ಈ ರೋಗದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ರಬ್ಬರ್ ಮಂಡಳಿ ಅಭಿವೃದ್ದಿ ಅಧಿಕಾರಿ ಬಾಲಕೃಷ್ಣ ತಿಳಿಸಿದರು.

Also Read  ಬಿಜೆಪಿ ವತಿಯಿಂದ ರಸ್ತೆ ದುರಸ್ಥಿಗೆ ಶ್ರಮದಾನ

ರಬ್ಬರ್ ಬೆಳೆಗಾರ ಪುಟ್ಟಣ್ಣ ಮಾತನಾಡಿ, ರಬ್ಬರ್ ಮಂಡಳಿ ಕಳೆದ 17 ವರ್ಷದ ಹಿಂದೆ 600 ರಬ್ಬರ್ ಗಿಡಗಳನ್ನು ನೆಟ್ಟು ಕೊಟ್ಟಿದೆ. ಆರು ವರ್ಷ ಇದರ ಲಾಲನೆ ಪಾಲನೆಯನ್ನು ಮಾಡಿಕೊಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಉತ್ತಮ ರಬ್ಬರ್ ಇಳುವರಿಯು ಬರುತ್ತಿತ್ತು. ಆದರೆ ಕಳೆದ ಒಂದು ವರ್ಷದ ಒಳಗಡೆ 20ಕ್ಕೂ ಅಧಿಕ ಮರಗಳನ್ನು ಬೇರು ರೋಗದಿಂದಾಗಿ ಕಳೆದುಕೊಂಡಿರುತ್ತೇನೆ. ಈ ರೋಗದ ಹತೋಟಿಯ ಔಷಧಿಗಾಗಿ ಪ್ರತೀ ದಿನ ಅಲೆದಾಡುತ್ತಿದ್ದೇನೆ. ಪುತ್ತೂರು, ಕಡಬ , ಸುಳ್ಯದಲ್ಲಿ ಎಲ್ಲಿಯು ಔಷಧ ಲಭ್ಯವಾಗಿಲ್ಲ. ಇದೀಗ ಈ ರೋಗದಿಂದ ಎಲ್ಲಾ ರಬ್ಬರ್ ಗಿಡಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದೇನೆ. ಇಲಾಖೆ ಸೂಕ್ತ ರೀತಿಯ ಕ್ರಮ ಕೈಗೊಳ್ಳದಿದ್ದಲ್ಲಿ ನನ್ನ ರಬ್ಬರ್ ಬೆಳೆ ಸಂಪೂರ್ಣವಾಗಿ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

error: Content is protected !!
Scroll to Top