(ನ್ಯೂಸ್ ಕಡಬ) newskadaba.com ಕಡಬ, ಜು.22. ಮುಸ್ಲಿಂ ಯುವತಿಯ ಮನೆಗೆ ಹಿಂದೂ ಸ್ನೇಹಿತೆ ತೆರಳಿದ್ದಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವತಿ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 12 ರಂದು ಉಪ್ಪಿನಂಗಡಿ ರಾಮನಗರ ನಿವಾಸಿ ಕಾವ್ಯ ಎಂಬಾಕೆ ಕೊಯಿಲ ಗ್ರಾಮದ ಕುದ್ಲೂರು ಎಂಬಲ್ಲಿರುವ ತನ್ನ ಮುಸ್ಲಿಂ ಸ್ನೇಹಿತೆ ಸಂಶೀನಾಳ ಮನೆಗೆ ಆಟೋ ರಿಕ್ಷಾದಲ್ಲಿ ಜೊತೆಯಾಗಿ ತೆರಳಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯ ರಿಕ್ಷಾ ಚಾಲಕ ಸುದರ್ಶನ್ ಎಂಬಾತ ಸಂಶೀನಾಳ ಸಹೋದರ ಝಿಯಾದ್ ಹಿಂದೂ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂಬ ಸುದ್ದಿ ಹಬ್ಬಿಸಿದ್ದ ಪರಿಣಾಮ ಸಂಘ ಪರಿವಾರದ ಕಾರ್ಯಕರ್ತರು ಕುದ್ಲೂರಿನಲ್ಲಿರುವ ಸಂಶೀನಾಳ ಮನೆಗೆ ನುಗ್ಗಿ ದಾಂಧಲೆ ಎಸಗಿದ್ದಾರೆ ಎಂದು ಆರೋಪಿಸಿ ಕಡಬ ಠಾಣೆಗೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ್ದ ಕಡಬ ಪೊಲೀಸರು ಮಾತುಕತೆ ನಡೆಸಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ಮತ್ತೆ ಕೆಲವು ಯುವಕರು ಸಂಶೀನಾಳ ಸಹೋದರ ಝಿಯಾದ್ ನನ್ನು ಊರಿಗೆ ಬರಲು ಬಿಡುವುದಿಲ್ಲ ಎಂಬ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಸಂಶೀನಾ ಕಡಬ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಗೋಳಿತ್ತಡಿ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ ಹಾಗೂ ಪ್ರಸಾದ್ ಕೊಲ್ಯ ಎಂಬವರ ವಿರುದ್ಧ ಐಪಿಸಿ ಕಲಂ 143, 147, 159, 504, 506ರಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.