(ನ್ಯೂಸ್ ಕಡಬ) newskadaba.com ಮನಿಲಾ, ನ.13. ಮೂರು ದಿನಗಳ ಕಾಲ ಫಿಲಿಪ್ಪಿನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳ್ಳಂಬೆಳಗ್ಗೆ ಹೊಲದಲ್ಲಿ ಹಾರೆ ಹಿಡಿದುಕೊಂಡು ಕೆಲಕಾಲ ರೈತರಾಗಿದ್ದರು.
ಮೂರು ದಿನಗಳ ಫಿಲಿಪ್ಪಿನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಲಾಸ್ ಬನೋಸ್‍ನಲ್ಲಿರುವ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಫಿಲಿಪ್ಪಿನ್ಸ್ ಅಧ್ಯಕ್ಷರ ಜೊತೆಗೂಡಿ ಹಾರೆಯಿಂದ ಹೊಲದ ಮಣ್ಣು ತೆಗೆದು ಒಂದು ಗಿಡವನ್ನು ನೆಟ್ಟಿದ್ದಾರೆ. ನಂತರ ಅಕ್ಕಿ ಪ್ರಯೋಗಾಲಯವನ್ನು ಇಬ್ಬರು ಜೊತೆಯಾಗಿ ಉದ್ಘಾಟಿಸಿದರು. ಐಆರ್‍ಆರ್‍ಐ ಸಂಸ್ಥೆಯು ಉತ್ತಮ ಗುಣಮಟ್ಟದ ಅಕ್ಕಿ ಬೀಜವನ್ನು ಅಭಿವೃದ್ಧಿಪಡಿಸುವ ಹಾಗೂ ಆಹಾರ ಕೊರತೆಯ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು.
ದಕ್ಷಿಣ ಏಷ್ಯಾದ ಮೊದಲ ಪ್ರಾಥಮಿಕ ಕೇಂದ್ರವನ್ನು ವಾರಣಾಸಿಯಲ್ಲಿ ತೆರೆಯಲು ಐಆರ್‍ಆರ್‍ಐ ಮಾಡಿದ್ದ ಪ್ರಸ್ತಾಪಕ್ಕೆ ಜುಲೈನಲ್ಲಿ ಸಂಸತ್ತು ಅನುಮೋದನೆ ನೀಡಿತ್ತು. ವಾರಣಾಸಿ ಸೆಂಟರ್ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅಕ್ಕಿ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಮೂರು ದಿನಗಳ ಕಾಲದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡುಟೆರ್ಟೆ ಮತ್ತು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ದ್ವಿ ಪಕ್ಷೀಯ ಮಾತುಕತೆ ನಡೆಸಲಿದ್ದಾರೆ.