(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ರಾಜರಾಜೇಶ್ವರಿ ನಗರದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್ ಬೆದರಿಕೆ ಹಾಕಿ ಸೋಮವಾರದಂದು ಇಡೀ ದಿನ ಆತಂಕ ಹುಟ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಲಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೇ ಇ-ಮೇಲ್ ಕಳುಹಿಸಿದ್ದಾನೆಂಬ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಲಾ ಸಿಬ್ಬಂದಿಯು ಇ-ಮೇಲ್ ಪರಿಶೀಲಿಸುತ್ತಿದ್ದ ವೇಳೆ ಅಪರಿಚಿತರೋರ್ವರು ಕಳುಹಿಸಿದ್ದ ಇ-ಮೇಲ್ ತೆರೆದಿದ್ದು, ಅದರಲ್ಲಿ ‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ (ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲಾ ಆವರಣದ 200 ಮೀಟರ್ ವರೆಗೆ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್, ಬಾಂಬ್ ಟೆರರಿಸ್ಟ್’ ಎಂಬ ಬೆದರಿಕೆ ನೋಡಿ ಆತಂಕಗೊಂಡ ಶಾಲಾ ಸಿಬ್ಬಂದಿ, ಪೊಲೀಸರಿಗೆ ನೀಡಿದ ಮಾಹಿತಿಯನುಸಾರ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ, ಮಕ್ಕಳನ್ನು ಬೇರೆ ಕಡೆ ಸ್ಥಳಾಂತರಿಸಿ ಪರಿಶೀಲನೆ ನಡೆಸಿದ್ದರು. ಆದರೆ ಬಳಿಕ ಇದೊಂದು ಹುಸಿ ಬಾಂಬ್ ಎಂದು ಪೊಲೀಸರು ಘೋಷಿಸಿದ್ದು, ತನಿಖೆಯ ವೇಳೆ ಇದೇ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಈ ಮೇಲ್ ಕಳುಹಿಸಿರುವುದಾಗಿ ತಿಳಿದುಬಂದಿದೆ. ಜು.21ರಂದು 10ನೇ ತರಗತಿಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು, ಅದನ್ನು ಮುಂದೂಡಿಸಲು ಈ ಪ್ಲ್ಯಾನ್ ರೂಪಿಸಿರುವುದು ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯನ್ನ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.