(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 19. ಸರಕಾರಿ ರಕ್ಷಿತಾರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ತುಂಡರಿಸಿ ಸೈಜ್ ಮಾಡುತ್ತಿದ್ದ ಮರಗಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯ ಕಜೆ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್, ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ, ಶಿಬಾಜೆ ನಿವಾಸಿ ಉಮೇಶ ಹಾಗೂ ವಿಜಯ ಎಂದು ಗುರುತಿಸಲಾಗಿದೆ. ಇವರು ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿಂದ ಬೆಲೆಬಾಳುವ ಮತ್ತಿ ಹಾಗೂ ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಕಡಿದು ಅದನ್ನು ಅಲ್ಲೇ ಸೈಜ್ ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರೆಂಬ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡವು, ದಾಳಿ ನಡೆಸಿ ಮರದ ದಿಮ್ಮಿ ಹಾಗೂ ಸೈಜ್ ತುಂಡುಗಳ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಉಪ ವಲಯಾರಣ್ಯಾಧಿಕಾರಿ ಸಂತೋಷ್ ತಡ್ಲಗಿ, ಅರಣ್ಯ ರಕ್ಷಕರಾದ ನಿಂಗಪ್ಪ ಅವಾರಿ, ಪ್ರಶಾಂತ್ ಮಾಳಗಿ, ರಸೂಲ್, ಸುನೀಲ್ ನಾಯಕ್, ಅರಣ್ಯ ವೀಕ್ಷಕ ದಾಮೋದರವರ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣದ ಹೆಚ್ಚಿನ ತನಿಖೆಗೆ ವಲಯ ಅರಣ್ಯಾಧಿಕಾರಿ ಮಧುಸೂಧನ್ ಅವರಿಗೆ ಹಸ್ತಾಂತರಿಸಿದ್ದಾರೆ.