ಕಡಬ: ಪುರುಷರತ್ನ ಬಯೋ ಪ್ರೊಡ್ಯೂಸರ್ ಕಂಪೆನಿಯ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.16. ಭಾರತವು ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಂಧನ ಕ್ಷೇತ್ರದಲ್ಲಿಯೂ ನಾವು ಸ್ವಾವಲಂಬಿಗಳಾಗುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ವಾವಲಂಬಿ ಭಾರತ ನಿರ್ಮಾಣವಾಗಲು ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಪುರುಷ ರತ್ನ ಬಯೋ ಪ್ರೊಡ್ಯೂಸಸ್ ಕಂಪೆನಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಇಂದು ಸಬಲರಾಗಿದ್ದೇವೆ. ಆದರೆ ಇಂಧನದ ಆಗತ್ಯತೆಯನ್ನು ಪೂರೈಸಲು ಇತರ ದೇಶಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ನಮ್ಮಲ್ಲಿದೆ. ಆದುದರಿಂದ ಜೈವಿಕ ಇಂಧನ ಹಾಗೂ ಜೈವಿಕ ಗೊಬ್ಬರವನ್ನು ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಮಾಡಿ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಮುಂದಾಗಿರುವ ಇಂತಹ ಸಂಸ್ಥೆಗಳಿಗೆ ನಾವೆಲ್ಲರೂ ಬೆಂಬಲ ನೀಡುವ ಅಗತ್ಯವಿದೆ. ಇಂದು ಪ್ರಕೃತಿಯಲ್ಲಿ ವಿಕೋಪಗಳು ನಡೆಯಲು ನಾವು ಪ್ರಕೃತಿಯೊಂದಿಗೆ ಬದುಕದಿರುವುದೇ ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಸ್.ಅಂಗಾರರವರು ದೇಶದ ಅಭಿವೃದ್ಧಿಯಲ್ಲಿ ಕಂಪೆನಿಗಳ ಪಾತ್ರ ಹಿರಿದಾಗಿದ್ದು, ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಸ್ವಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಭಾರತ ನಿರ್ಮಾಣದ ಹಿರಿಯರ ಕನಸು ಸಾಕಾರಗೊಳಿಸಲು ಯುವ ಜನತೆ ಮುಂದಾಗಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಂಡು ನಿರುದ್ಯೋಗ ನಿವಾರಣೆಯತ್ತ ಯುವ ಜನತೆ ಹೆಜ್ಜೆ ಇಡಬೇಕು. ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯಲ್ಲಿ ಒಳನಾಡು ಮೀನುಗಾರಿಕೆಗೆ ಮಹಿಳೆಯರಿಗೆ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಶೇ.60 ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಅರ್ಹ ಫಲಾನುಭವಿಗಳು ಈ ರೀತಿಯ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದರು.

Also Read  'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ; ಕಪ್ಪು ಪಟ್ಟಿ ಪ್ರದರ್ಶನ       50ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ               

ಕಡಬ ಸೈಂಟ್ ಜೋಕಿಮ್ಸ್‌ ಚರ್ಚ್‌ನ ಧರ್ಮಗುರು ವಂ| ಅರುಣ್ ವಿಲ್ಸನ್ ಲೋಬೋ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಎನ್ನುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸದೇ ಹೋದಲ್ಲಿ ನಮ್ಮ ಮುಂದಿನ ಪೀಳಿಗೆ ಅದರ ದುಷ್ಪರಿಣಾಮಗಳಿಂದ ನರಳಬೇಕಾದ ಘೋರ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಲ್ಲಾ ರೀತಿಯ ತ್ಯಾಜ್ಯಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾದ ಇಂಧನವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಪುರುಷರತ್ನ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ.ಬ್ಯಾಂಕ್‌ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಮಾಜಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸಿ.ಪಿ.ಸೈಮನ್ ಕಡಬ, ಮುಂಬೈಯ ಮೀರಾ ಕ್ಲೀನ್ ಫ್ಯುಯಲ್ಸ್ ಸಂಸ್ಥೆಯ ಅಧಿಕಾರಿಗಳಾದ ವಸಂತ ಪೂಜಾರಿ ಮೂಡಬಿದ್ರೆ, ಪ್ರಶಾಂತ್ ಕುಮಾರ್, ಕಿರಣ್ ಗೂಗ್ರೆ, ಶ್ರೀನಿವಾಸ ದೋಂತ್ರೆ, ಮಹೇಶ್ ನಾಂದ್ರೇಕ‌ರ್ ಹಾಗೂ ಪ್ರವೀಣ್ ಪಾಟೀಲ್‌ ಮಾತನಾಡಿದರು. ಪುರುಷ ರತ್ನ ಸಂಸ್ಥೆಯ ನಿರ್ದೇಶಕರಾದ ಸಂದೇಶ್ ಎ. ಶಬರಾಯ, ಜೇಮ್ಸ್ ಕ್ರಿಶಲ್ ಡಿ’ ಸೋಜ, ಸೋಮಶೇಖರ ಎಂ.ಬಿ., ಶುಭ ಕಿರಣ್ ಪಿ., ಶೈಲ ಶ್ರೀ ಪ್ರವೀಣ್ ಕುಮಾರ್, ಕ್ಲಾರಾ ಲೋಬೊ, ಜಯಂತಿ ಕೆ. ಉಪಸ್ಥಿತರಿದ್ದರು. ಪುರುಷ ರತ್ನ ಸಂಸ್ಥೆಯ ನಿರ್ದೇಶಕ ವಿಜಯಕುಮಾರ್ ರೈ ಕರ್ಮಾಯಿ ಸ್ವಾಗತಿಸಿ, ಆಡಳಿತ ನಿರ್ದೇಶಕ ಕಡೆಂಜಿಗುತ್ತು ಪ್ರವೀಣ್ ಕುಮಾರ್‌ ರವರು ಪ್ರಸ್ತಾವನೆಗೈದರು. ಪತ್ರಕರ್ತ ನಾಗರಾಜ್ ಎನ್.ಕೆ. ನಿರೂಪಿಸಿ, ಸಹಾಯಕ ಉಪ ನಿರ್ದೇಶಕ ಜೋಕಿಂ ಡಿ’ ಸೋಜ ವಂದಿಸಿದರು.

Also Read  ಸರ್ಕಾರಿ ಆಸ್ಪತ್ರೆ ರೋಗಿಗಳ ಕಂಬಳಿಗಳ ಮೇಲೆ ಹಂದಿ, ನಾಯಿಗಳ ಓಡಾಟ !       

ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಬೆಳಂದೂರಿನ ಟಿ.ಎಸ್.ಆಚಾರ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

error: Content is protected !!
Scroll to Top