ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಮಾರುತಿ 800 ಕಾರು ➤‌ ಕಾರು ಪತ್ತೆಯಾದರೂ ಕಾರಿನಲ್ಲಿದ್ದವರ ಸುತ್ತ ಕಾಡುತ್ತಿದೆ ಅನುಮಾನದ ಹುತ್ತ..

(ನ್ಯೂಸ್ ಕಡಬ) newskadaba.com ಕಡಬ, ಜು.10. ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್(21) ಎಂಬವರು ಗುತ್ತಿಗಾರಿನಲ್ಲಿ ಮರದ ಕೆಲಸ ಮಾಡುತ್ತಿದ್ದು, ಶನಿವಾರ ತಡರಾತ್ರಿ ವಿಟ್ಲದಿಂದ ಗುತ್ತಿಗಾರಿಗೆ ತೆರಳುತ್ತಿದ್ದ ವೇಳೆ ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಇವರು ಸಂಚರಿಸುತ್ತಿದ್ದ ಕಾರು ಗೌರಿಹೊಳೆಗೆ ಬಿದ್ದಿದೆ. ರಾತ್ರಿಯಾದುದರಿಂದ ಈ ಘಟನೆ ಯಾರಿಗೂ ತಿಳಿದಿರಲಿಲ್ಲ.

ಭಾನುವಾರ ಬೆಳಿಗ್ಗೆ ನಮಾಝ್ ನಿರ್ವಹಿಸಲೆಂದು ಸ್ಥಳೀಯ ವ್ಯಕ್ತಿಯೋರ್ವರು ಸೇತುವೆಯ ಮೇಲಿನಿಂದ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಸೇತುವೆಯ ತಡೆಗೋಡೆಯ ಕಂಬ ಮುರಿದಿರುವುದನ್ನು ಗಮನಿಸಿ ಬೈತಡ್ಕ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದಿರುವ ದೃಶ್ಯವು ಕಂಡುಬಂದಿದೆ. ಬಳಿಕ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ದಳದವರನ್ನು ಕರೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಮಧ್ಯಾಹ್ನದ ವೇಳೆ ಕಾರು ಪತ್ತೆಯಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಕಾರನ್ನು ಮೇಲಕ್ಕೆತ್ತಲಾಗಿದೆ. ಕಾರಿನಲ್ಲಿದ್ದವರು ನೀರುಪಾಲಾಗಿದ್ದಾರೆ ಎಂದು ಶೋಧ ಕಾರ್ಯ ಮುಂದುವರಿಸಲಾಗಿತ್ತು. ನೀರಿನ ತೀವ್ರ ಸೆಳೆತದಿಂದಾಗಿ ಶೋಧ ಕಾರ್ಯಾಚರಣೆಯನ್ನು ರಾತ್ರಿ ವೇಳೆಗೆ ನಿಲ್ಲಿಸಲಾಗಿದ್ದು, ಸೋಮವಾರ ಬೆಳಿಗ್ಗೆ 8.30 ರಿಂದ ಮತ್ತೆ ಶೋಧ ಕಾರ್ಯ ಆರಂಭಗೊಳ್ಳಲಿದೆ.

ಈ ನಡುವೆ ಕಾರು ಅಪಘಾತವಾದ ನಂತರ ನೀರುಪಾಲಾದವರು ಮನೆಗೆ ಕರೆ ಮಾಡಿ ಕಾರು ಮತ್ತು ಲಾರಿ ನಡುವೆ ಅಪಘಾತವಾದ ಬಗ್ಗೆ ತಿಳಿಸಿ ಕರೆ ಕಡಿತಗೊಳಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಪಘಾತದ ನಂತರವೂ ಯುವಕರಿಬ್ಬರು ಮೊಬೈಲ್ ಬಳಸಿರುವುದು ತನಿಖೆಯಿಂದ ಬಯಲಾಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಕೆಲವೇ ಕಿ.ಮೀ ದೂರದ ಸವಣೂರು ಚೆಕ್ ಪೋಸ್ಟ್ ನಲ್ಲಿ ತಡರಾತ್ರಿ ಸಿಂಗಲ್ ಹೆಡ್ ಲೈಟ್ ಹಾಕಿ ಬಂದಿದ್ದ ಕಾರನ್ನು ತಡೆದಿದ್ದ ಪೊಲೀಸರು ವಿಚಾರಿಸಿ ಕಳುಹಿಸಿದ್ದರು. ಈ ವೇಳೆ ಗುತ್ತಿಗಾರಿನ ಅಕ್ಕನ ಮನೆಗೆ ಹೋಗುವುದಾಗಿ ಹೇಳಿದ್ದರಿಂದ ವಿವರ ಕೇಳಿ ಕಳುಹಿಸಿದ್ದರು. ಅಪಘಾತದ ನಂತರ ಕರೆ ಮಾಡಿದ್ದ ಇವರು ಆ ಬಳಿಕ ಎಲ್ಲಿ ಹೋದರು ಎನ್ನುವುದು ಇದೀಗ ಯಕ್ಷಪ್ರಶ್ನೆಯಾಗಿ ಪೊಲೀಸರನ್ನೇ ಕಾಡುತ್ತಿದೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

error: Content is protected !!

Join the Group

Join WhatsApp Group