ವಾರಪೂರ್ತಿ ರಜೆ ಹಿನ್ನೆಲೆ- ಸಾರ್ವತ್ರಿಕ ರಜೆಗೆ ಕತ್ತರಿ ➤ ಶಿಕ್ಷಣ ಸಂಸ್ಥೆಗಳಿಗೆ ದ.ಕ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 08. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾದ ರಜೆಯ ಅವಧಿಯಲ್ಲಿ ನಿರ್ವಹಿಸಬೇಕಾಗಿದ್ದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದಾರೆ.


ಜಿಲ್ಲೆಯಲ್ಲಿ ಕಳೆದ ಮಂಗಳವಾರದಿಂದ ವಿಪರೀತ ಮಳೆ ಸುರಿಯುತ್ತಿದ್ದು, ನಿರಂತರವಾಗಿ ರೆಡ್ ಅಲರ್ಟ್ ಘೋಷಣೆಯಾಗುತ್ತಿದೆ. ಅಲ್ಲದೇ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮನೆಗಳಿಗೂ ನೀರು ನುಗ್ಗುತ್ತಿದೆ. ಜಿಲ್ಲೆಯ ಕೆಲವೆಡೆ ಭೂಕುಸಿತದಂತಹ ಘಟನೆಗಳೂ ನಡೆದಿವೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಸೇರಿದಂತೆ ಸರ್ಕಾರಿ, ಅನುದಾನಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿದ್ದು, ಶನಿವಾರವೂ ರಜೆ ಮುಂದುವರಿಯಲಿದೆ. ಆದರೆ ಈ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳಿಗೆ ರಜೆಯಿಂದಾಗಿ ಸಮಸ್ಯೆಯಾಗಿದ್ದು, ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೂ ಪರಿಣಾಮ ಬೀರಲಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಳೆಗಾಗಿ ನೀಡಿದ ರಜೆಯ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜೆಗಳಂದು ಸರಿದೂಗಿಸಬೇಕು ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

error: Content is protected !!

Join the Group

Join WhatsApp Group