(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 07. ಕಾಲು ಜಾರಿ ಬಿದ್ದಿರುವ ಅತ್ತೆಗೆ ಚಿಕಿತ್ಸೆ ಕೊಡಿಸದೇ ಮನೆಯ ಶೌಚಗೃಹದಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೇ ಶಿಕ್ಷೆ ನೀಡುತ್ತಿದ್ದ ಮಾಹಿತಿ ತಿಳಿದ ಹಿರಿಯ ನಾಗರಿಕ ಸಮಿತಿಯು, ಗಿರಿಜಾ(70) ಅವರನ್ನು ಶೌಚಗೃಹದಿಂದ ಕರೆತಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿಂದ ವರದಿಯಾಗಿದೆ.
ಮನೆಯ ಜಗಲಿಯಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿದ್ದ ನನಗೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸದೇ, ನೋವಿನಿಂದ ನಡೆಯಲು ಸಾಧ್ಯವಾಗದೇ ಹಾಸಿಗೆಯಲ್ಲಿ ಮಲಗುವಂತಹ ಪರಿಸ್ಥಿತಿ ಬಂದಾಗ ಯಾವುದೇ ಆರೈಕೆ ಮಾಡದೇ ಶೌಚಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದರು ಎಂದು ಮಗನಾದ ಹರಿರಾಂ ಮತ್ತು ಸೊಸೆ ಪೂಜಾ ಎಂಬವರ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಗಿರಿಜಾರವರು ದೂರು ನೀಡಿದ್ದಾರೆ. ಇನ್ನು ಈ ವಿಷಯ ತಿಳಿದ ಹಿರಿಯ ನಾಗರಿಕ ಸಮಿತಿಯು ಗಿರಿಜಾ ಅವರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.