(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 05. ಕಳ್ಳರು ಇಲ್ಲಿನ ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳುಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಳಂಜಿ ಮನೆ ನಿವಾಸಿ ಮಂಜು, ಕೊಡಿಯಭೈಲು ಮನೆ ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬರ್ಪೆಡ್ಕ ನಿವಾಸಿ ಪವನ್ ಕುಮಾರ್ ಹಾಗು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು ಇನ್ನೊಬ್ಬ ಅಪ್ರಾಪ್ತ ಬಾಲಕ. ಕೊಳ್ತಿಗೆ ಗ್ರಾಮದ ಕುದ್ಕುಳಿ ಶಾಫಿ ಎಂಬವರ ಗೋದಾಮಿನಲ್ಲಿ ತುಂಬಿಸಿಡಲಾಗಿದ್ದ 1,18,750 ರೂ. ಮೌಲ್ಯದ 10 ಗೋಣಿ ಕಾಳುಮೆಣಸನ್ನು ಜೂ. 15ರಂದು ಕಳ್ಳತನಗೈಯಲಾಗಿತ್ತು. ಈ ಕುರಿತು ತೋಟ ನೋಡಿಕೊಳ್ಳುತ್ತಿದ್ದ ಆದಂ ಕುಂಞಿ ಎಂಬವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು. ಇದರಂತೆ ತನಿಖೆ ನಡೆಸುತ್ತಿದ್ದ ಬೆಳ್ಳಾರೆ ಠಾಣಾ ಉಪನಿರೀಕ್ಷಕರಿಗೆ ದೊರೆತ ಮಾಹಿತಿ ಅಧಾರದಲ್ಲಿ ಜುಲೈ 4 ರಂದು ಅಡ್ಕಾರ್ ನಲ್ಲಿ ಕಾರೊಂದನ್ನು ತಡೆದು ಮಂಜು ಎಂಬಾತನನ್ನು ವಶಕ್ಕೆ ಪಡೆದು, ಆತ ನೀಡಿದ ಮಾಹಿತಿಯಂತೆ ಆರೋಪಿ ಪವನ್ ಕುಮಾರ್ ಎಂಬಾತನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.