ಬಡ ಕುಟುಂಬಗಳನ್ನು ಬೀದಿಗೆ ತಳ್ಳಿದ ಚಿಕ್ಕಮಗಳೂರು ನಗರಸಭೆ ➤ ಪಾಪ್ಯುಲರ್ ಫ್ರಂಟ್ ಆಕ್ರೋಶ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು. 04. ಬಡ ಕುಟುಂಬಗಳ ಮನೆಗಳ ಮೇಲೆ ಏಕಾಏಕಿ ಬುಲ್ಡೋಝರ್ ಹರಿಸಿ ಅವರನ್ನು ಬೀದಿಗೆ ತಳ್ಳಿದ ಚಿಕ್ಕಮಗಳೂರು ನಗರ ಸಭೆ ಆಡಳಿತದ ಅನ್ಯಾಯದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಶರೀಫ್ ಕೊಡಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಬಡವರಿಗಾಗಿ ಮೀಸಲಿರಿಸಿದ್ದ ಇಂದಿರಾನಗರ ಬಡಾವಣೆಯಲ್ಲಿ ಸುಮಾರು 60 ವಸತಿ ರಹಿತ ಕುಟುಂಬಗಳು ಆಶ್ರಯ ಪಡೆದುಕೊಂಡಿವೆ. 16 ವರ್ಷಗಳ ಹಿಂದೆ ಅಂದಿನ ನಗರ ಸಭೆ ಆಯುಕ್ತರು ಮತ್ತು ಅಧ್ಯಕ್ಷರು ಆಶ್ರಯ ಯೋಜನೆಯಡಿಯಲ್ಲಿ ಹಲವು ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರಗಳನ್ನು ವಿತರಿಸಿದ್ದರು. ಹಲವು ಕುಟುಂಬಗಳು ಹಕ್ಕು ಪತ್ರದ ಆಧಾರದಲ್ಲಿಯೇ ಅಲ್ಲಿ ಮನೆ ಕಟ್ಟಿಕೊಂಡು ನೆಲೆಸಿದ್ದವು. ಆದರೆ ಇದೀಗ ನಗರಸಭೆ ಆಡಳಿತವು ಆ ಹಕ್ಕು ಪತ್ರ ಅಕ್ರಮ ಎಂದು ವಾದಿಸಿ ಕಾರ್ಯಾಚರಣೆಗೆ ಇಳಿದಿದೆ. ಈ ನಡುವೆ ಹಕ್ಕುಪತ್ರ ಹೊಂದಿದ್ದ ಶಹನಾಝ್ ಎಂಬವರ ಮನೆಯನ್ನೂ ಅಕ್ರಮವಾಗಿ ಕೆಡವಲಾಗಿದೆ. ಇನ್ನು ನಗರಸಭೆಯಿಂದ ನಿರಾಕ್ಷೇಪಣಾ ಪಡೆದು ಮನೆ ನಿರ್ಮಿಸಿದ್ದ ಕೆಲವು ಕುಟುಂಬಗಳು ಹಕ್ಕು ಪತ್ರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಗರ ಸಭೆ ಆಡಳಿತಾಧಿಕಾರಿಗಳು, ಸ್ಥಳೀಯ ಶಾಸಕರು ಇದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಮಾತ್ರವಲ್ಲ, ಅವರಿಗೆ ಆಡಳಿತಾತ್ಮಕವಾಗಿ ಹಕ್ಕು ಪತ್ರಗಳನ್ನು ನೀಡದೇ ಈಗ ರಾಜಕೀಯ ದುರುದ್ದೇಶದಿಂದ ಅವರ ಮನೆಗಳನ್ನು ಬುಲ್ಡೋಝರ್ ಮೂಲಕ ಪೂರ್ವಾಗ್ರಹ ಪೀಡಿತವಾಗಿ ನೆಲಸಮಗೊಳಿಸಲಾಗಿದೆ. ವಿಪರೀತ ಮಳೆ ಸುರಿಯುತ್ತಿರುವ ಈ ಸಂದರ್ಭದಲ್ಲಿ ಮನೆ ನೆಲಸಮಗೊಳಿಸಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು ಮತ್ತು ವೃದ್ಧರನ್ನು ಬೀದಿಗೆ ತಳ್ಳಿರುವುದು ಅಮಾನವೀಯ ಕೃತ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಬಿಜೆಪಿ ಪರ ಒಲವು ಹೊಂದಿದ ಕುಟುಂಬಗಳ ಮನೆಗಳನ್ನು ಕೆಡವದೇ, ಒಂದು ನಿರ್ದಿಷ್ಟ ಸಮುದಾಯದ ಮನೆಗಳನ್ನೇ ಗುರಿಪಡಿಸಿರುವುದು ಬಹಳ ಸ್ಪಷ್ಟವಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕ ಸಿ.ಟಿ.ರವಿಯವರ ಮೌನವು ಅವರ ಹಗೆತನದ ರಾಜಕೀಯವನ್ನು ಬಿಂಬಿಸುತ್ತಿದೆ. ಜಿಲ್ಲಾಧಿಕಾರಿಯವರು ಕೂಡಲೇ ಮಧ್ಯಪ್ರವೇಶಿಸಿ ಬಡ ಕುಟುಂಬಗಳಿಗಾದ ಅನ್ಯಾಯಕ್ಕೆ ನ್ಯಾಯ ಕಲ್ಪಿಸಬೇಕು. ಮನೆ ಕಳೆದುಕೊಂಡವರಿಗೆ ಕೂಡಲೇ ನಷ್ಟ ಪರಿಹಾರ ಕಲ್ಪಿಸಬೇಕು. ಬುಲ್ಡೋಝರ್ ಮೂಲಕ ಮನೆ ನೆಲಸಮಗೊಳಿಸಿದ ಅಧಿಕಾರಿಗಳು ಮತ್ತು ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಡಾವಣೆಯಲ್ಲಿ ನೆಲೆಸಿರುವ ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಕಲ್ಪಿಸಿ ಅವರ ವಸತಿಯ ಹಕ್ಕನ್ನು ಖಾತರಿಪಡಿಸಬೇಕೆಂದು ಶರೀಫ್ ಕೊಡಾಜೆ ಒತ್ತಾಯಿಸಿದ್ದಾರೆ.

error: Content is protected !!
Scroll to Top