ಸಿದ್ದರಾಮಯ್ಯ, ಡಿಕೆಶಿಗೆ ಬಹಿರಂಗ ಕೊಲೆ ಬೆದರಿಕೆ ➤ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 01. ಉದಯಪುರದ ಟೈಲರ್ ಹತ್ಯೆ ವಿಚಾರವಾಗಿ ಪಬ್ಲಿಕ್ ಟಿವಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಕರೆಕೊಟ್ಟ ದಾವಣಗೆರೆಯ ವೀರಣ್ಣ ಹಾಗೂ ಅವರ ಹೇಳಿಕೆಗೆ ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಈ ಕುರಿತು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ನೀಡಿದ್ದು, ಜೂನ್ 30 ರಂದು ಪಬ್ಲಿಕ್ ಟಿವಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದ ಸಂದರ್ಭ ದಾವಣಗೆರೆಯಿಂದ ವೀರಣ್ಣ ಎಂಬಾತ ಕರೆ ಮಾಡಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಗುಂಡಿಟ್ಟು ಸಾಯಿಸಿದರೆ ಎಲ್ಲಾ ಸರಿಹೋಗುತ್ತದೆ ಎಂದು ಹತ್ಯೆ ಮಾಡಲು ಪ್ರಚೋದನೆ ನೀಡಿದ್ದಾನೆ. ಆತನ ಹೇಳಿಕೆಯನ್ನು ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹಿಸಲಾಗಿದೆ. ಈಗಾಗಲೇ ದೇಶದಾದ್ಯಂತ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಗೌರವಾನ್ವಿತ ಸುಪ್ರೀಂಕೋರ್ಟ್ ಕೂಡಾ ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿರುವ ದಾವಣಗೆರೆ ಮೂಲದ ವೀರಣ್ಣ ಮತ್ತು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Also Read  ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

error: Content is protected !!
Scroll to Top