(ನ್ಯೂಸ್ ಕಡಬ) newskadaba.com ಕೃಷ್ಣಾಪುರ, ಜೂ. 30. ಮದರಸ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು ಸಂತ್ರಸ್ತ ವಿದ್ಯಾರ್ಥಿಯೇ ಕೃತ್ಯವೆಸಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಮಿಷನರ್ ಶಶಿಕುಮಾರ್, ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ವಿದ್ಯಾರ್ಥಿಯ ಹೇಳಿಕೆ ಹಾಗೂ ಪೋಷಕರ ಹೇಳಿಕೆಯನ್ನು ದಾಖಲಿಸಿ ತನಿಖೆ ಕೈಗೊಂಡಾಗ 13 ವರ್ಷದ ಸಂತ್ರಸ್ತ ವಿದ್ಯಾರ್ಥಿಯೇ ವೈಯಕ್ತಿಕ ಸಮಸ್ಯೆಯಿಂದ ಈ ನಾಟಕವಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ, “ನಾನು ಓದುವುದರಲ್ಲಿ ಹಿಂದೆ ಇದ್ದೇನೆ, ಓದಿದರೂ ಅರ್ಥ ಆಗುವುದಿಲ್ಲ, ಶಾಲೆಯಲ್ಲಿ ಒಳ್ಳೆಯ ಸ್ನೇಹಿತರಿಲ್ಲ, ಕಪ್ಪಾಗಿದ್ದಾನೆ ಎಂದು ಸ್ನೇಹಿತೆರಲ್ಲ ದೂರ ಮಾಡುತ್ತಿದ್ದರು. ಮನೆಯಲ್ಲೂ ಬಡತನವಿದೆ. ತಂದೆ ತಾಯಿ ಹಣ ಖರ್ಚು ಮಾಡಿ ನನ್ನನ್ನು ಓದಿಸುತ್ತಿದ್ದರೂ ನನಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ. ಸ್ನೇಹಿತರು ಕೂಡಾ ನನ್ನಲ್ಲಿ ಹಣ ಮತ್ತು ಸೈಕಲ್ ಇದ್ದಾಗ ಮಾತ್ರ ಹತ್ತಿರ ಬರುತ್ತಾರೆ. ಇದರಿಂದ ಬೇಸತ್ತ ನಾನು ಪೆನ್ ನಿಂದ ಬಟ್ಟೆ ಹರಿದುಕೊಂಡೆ” ಎಂದು ಹೇಳಿಕೆ ನೀಡಿದ್ದಾನೆ. ಮದ್ರಸ ಸಮಿತಿ, ಪೋಷಕರು ಹಾಗೂ ಮದರಸ ಉಸ್ತಾದ್ ಅವರನ್ನು ಕರೆಸಿ ಈ ವಿವರಗಳನ್ನು ನೀಡಲಾಗಿದೆ. ಈ ಮೂಲಕ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ ಎಂದು ಶಶಿಕುಮಾರ್ ತಿಳಿಸಿದರು.