(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಲೈಸೆನ್ಸ್ ಇಲ್ಲದೇ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಗೆ ಆರೋಗ್ಯ ಇಲಾಖೆಯು ಬೀಗ ಜಡಿದು, ಕೇಸು ದಾಖಲಿಸಿದ ಘಟನೆ ಕಲ್ಲುಗುಂಡಿ ಎಂಬಲ್ಲಿ ನಡೆದಿದೆ.
ಕಲ್ಲುಗುಂಡಿಯ ರೋಸ್ತಿ ಮ್ಯಾಥ್ಯೂ ಎಂಬವರು ಪರವಾನಿಗೆ ಇಲ್ಲದೇ ಮಾಂಬುಳಿ ಕ್ಲಿನಿಕ್ ಎಂಬ ಹೆಸರಿನ ಕ್ಲಿನಿಕ್ ನ್ನು ನಡೆಸುತ್ತಿದ್ದರು. ಈ ಕುರಿತು ಆರೋಗ್ಯ ಇಲಾಖೆಗೆ ದೂರು ಹೋಗಿದ್ದ ಹಿನ್ನೆಲೆ, ಇಲಾಖೆಯು ಕ್ಲಿನಿಕ್ ನಡೆಸುವವರ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಪಿಎಂಇ ನೋಂದಣಿ ಇಲ್ಲದೇ ಕ್ಲಿನಿಕ್ ನಡೆಸುವುದು ಕೆಪಿಎಂಇ ಕಾಯ್ದೆ 19 ಪ್ರಕಾರ ಅಕ್ರಮವಾಗುತ್ತದೆ. ಈ ಕುರಿತು ಮಾಹಿತಿ ಪಡೆದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕೆಪಿಎಂಇ ನೋಡಲ್ ಅಧಿಕಾರಿ ಡಾ.ದೀಪಾ ಪ್ರಭು ನೇತೃತ್ವದ ತಂಡ ಕ್ಲಿನಿಕ್ ಗೆ ಬೀಗ ಜಡಿದು, ಕ್ಲಿನಿಕ್ ನಲ್ಲಿದ್ದ ವಸ್ತುಗಳನ್ನೆಲ್ಲ ಮುಟ್ಟುಗೋಲು ಹಾಕಿದೆ.