ಕಡಬ: ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಜೂ. 29.‌ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ವಲಯದ ರೆಂಜಿಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್, ಪ್ರತೀ ಜೀವ ಸಂಕುಲನಕ್ಕೆ ಪ್ರಕೃತಿಯ ಕೊಡುಗೆ ಮಹತ್ತರವಾದುದು. ಧರ್ಮಸ್ಥಳ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಒಂದಾಗಿದೆ. ನಾವು ಪ್ರಕೃತಿಯ ಆಸರೆ ಪಡೆದಷ್ಟು ಪ್ರಕೃತಿಯ ಸಂಪತ್ತು ನಾಶವಾಗಿ ಮುಂದೊಂದು ದಿನ ಶುಲ್ಕ ನೀಡುವಂತಾಗಬಹುದು. ಅದಕ್ಕಾಗಿ ಪ್ರತಿಯೊಬ್ಬ ಮಾನವ ಪರಿಸರದಲ್ಲಿ ಗಿಡನೆಟ್ಟು ಪೋಷಿಸಿದರೆ ಮುಂದಿನ ಪೀಳಿಗೆಗೂ ಪ್ರಕೃತಿ ಸೊಬಗನ್ನು ಸವಿಯಲು ಸಹಕಾರಿಯಾಗುತ್ತದೆ. “ಮನೆಗೊಂದು ಮಗು, ಮಗುವಿಗೊಂದು ಮರ” ಎಂಬಂತೆ ಪ್ರತೀ ಜೀವಿಗಳ ಬದುಕಿಗೂ ಗಿಡ-ಮರಗಳು ಆಸರೆ ಅವಶ್ಯಕ ಎಂದರು. ಕಾರ್ಯಕ್ರಮದ ಉದ್ಘಾಟನೆಗೈದು ಮಾತನಾಡಿದ ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಆಚಾರ್ಯ, ಪ್ರಕೃತಿಯ ವೈಪರೀತ್ಯಕ್ಕೆ ಮಾನವರೇ ಕಾರಣ, ನಾವು ಪರಿಸರವನ್ನು ಸಂರಕ್ಷಿಸಿದಷ್ಟು ಭೂಮಿಯ ಮೇಲೆ ಬದುಕುವ ಹಕ್ಕನ್ನು ಪಡೆಯುತ್ತಿರುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಗದೀಶ್ ವಹಿಸಿದ್ದರು. ಸೇವಾಪ್ರತಿನಿಧಿ ಸುಗುಣ ಸ್ವಾಗತಿಸಿ, ಶಿಕ್ಷಕಿ ಶಕುಂತಲಾ ಧನ್ಯವಾದಗೈದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬೇಬಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾಮಕ್ಕಳು, ಪೋಷಕರು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.

Also Read  ಕಡಬ , ಪುತ್ತೂರಿನಲ್ಲಿ ಇಂದು 70 ಮಂದಿಗೆ ಕೊರೋನ ಪಾಸಿಟವ್ ದೃಢ

error: Content is protected !!
Scroll to Top