(ನ್ಯೂಸ್ ಕಡಬ) newskadaba.com ಮಡಿಕೇರಿ, ಜೂ. 28. ಕೊಡಗಿನ ವಿವಿಧೆಡೆ ಉಂಟಾದ ಭೂಕಂಪನದ ಭೀತಿಯ ನಡುವೆಯೇ ಕರಿಕೆ ಗ್ರಾ.ಪಂ ವ್ಯಾಪ್ತಿಯ ಕುಂಡತ್ತಿಕಾನ ಗ್ರಾಮದಲ್ಲಿ ಬಂಡೆಯೊಂದು ಮನೆಯ ಮೇಲೆ ಉರುಳಿರುವ ಘಟನೆ ವರದಿಯಾಗಿದೆ
ಜೂ. 26ರ ಮಧ್ಯರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ವಾರ್ಡ್ ನಂ.3ರ ನಿವಾಸಿ ಜಾನಕಿ ಎಂಬವರ ಮನೆಯ ಶೀಟ್ ನ ಮೇಲೆ ಬಂಡೆಕಲ್ಲೊಂದು ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಛಾಣಿ ಮತ್ತು ಅಡುಗೆ ಕೋಣೆ ಸಂಪೂರ್ಣ ಹಾನಿಗೀಡಾಗಿದ್ದು, ವಸ್ತುಗಳೆಲ್ಲವೂ ಧ್ವಂಸಗೊಂಡಿದೆ. ಅದೃಷ್ಟವಶಾತ್ ಪಕ್ಕದ ಕೋಣೆಯಲ್ಲೇ ನಿದ್ರಿಸುತ್ತಿದ್ದ ಜಾನಕಿ ಹಾಗೂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ಕೇಳಿ ಬಂದ ದೊಡ್ಡ ಶಬ್ದದಿಂದ ಎಚ್ಚರಗೊಂಡಾಗ ಬಂಡೆಕಲ್ಲು ಅಡುಗೆ ಕೋಣೆಯೊಳಗೆ ಬಿದ್ದಿತ್ತು. ನಂತರ ನಾವು ಮತ್ತಷ್ಟು ಅನಾಹುತ ಸಂಭವಿಸಬಹುದೆಂದು ಭಯಗೊಂಡು ಪಕ್ಕದ ಮನೆಯಲ್ಲಿ ಆಶ್ರಯ ಪಡೆದೆವು ಎಂದು ಜಾನಕಿ ಹೇಳಿದ್ದಾರೆ. ಪಕ್ಕದಲ್ಲೇ ಇರುವ ಬೆಟ್ಟದಿಂದ ಬಂಡೆ ಉರುಳಿದ್ದು, ಇನ್ನೂ ಎರಡು ಬಂಡೆಗಳು ಬೀಳುವ ಹಂತದಲ್ಲಿವೆ. ಈ ಭಾಗದಲ್ಲಿ ಹತ್ತಾರು ಮನೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹಿರಿಯ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆತಂಕ ದೂರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.