(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಗೌಡ ಸಮುದಾಯದ ಆಚಾರ, ವಿಚಾರ, ಸಂಸ್ಕೃತಿ ಸಂಸ್ಕಾರವನ್ನು ಉಳಿಸಿಕೊಂಡು ಹೋದಲ್ಲಿ ಮಾತ್ರ ಸಮಾಜದಲ್ಲಿ ನಮ್ಮತನ ಉಳಿಯಲು ಸಾಧ್ಯವಿದೆ. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಪಾಲನೆ ಮಾಡುವುದರೊಂದಿಗೆ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಗೌಡ ಹೇಳಿದರು.
ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗೌಡ ಸಂಸ್ಕೃತಿ ಆಚಾರ- ವಿಚಾರ ಕಾರ್ಯಾಗಾರ, ಗ್ರಾಮ ಸಮಿತಿ ಪುನರಚನೆ ಮತ್ತು ಊರ ಗೌಡರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌಡರ ಶುಭ ಕಾರ್ಯದಲ್ಲಿ ಸಂಪ್ರದಾಯ ಪಾಲನೆಯಾಗುತ್ತಿಲ್ಲ. ಆಧುನೀಕರಣದ ಗುಂಗಿನಲ್ಲಿ ಅಚರಣೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಈ ಬಗ್ಗೆ ನಮ್ಮ ಹಿರಿಯರು ಯುವ ಪೀಳಿಗೆಗೆ ತಿಳಿ ಹೇಳುವ ಕಾರ್ಯವಾಗಬೇಕು ಎಂದರು. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಮಾತನಾಡಿ, ನಮ್ಮ ಸಮಾಜ ಮತ್ತಷ್ಟು ಬಲಿಷ್ಠವಾಗುವ ನಿಟ್ಟಿನಲ್ಲಿ ಸಂಘಟಿತರಾಗುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ್ ಶುಭಹಾರೈಸಿದರು. ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಒಕ್ಕಲಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ತಾಲೂಕು ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಗೌಡ, ಮಾಗಣೆ ಗೌಡರಾಗಿರುವ ದೇವಪ್ಪ ಗೌಡ ನಡುಮನೆ, ಒಕ್ಕಲಿಗ ಸ್ವಸಹಾಯ ಸಂಘ ಕುದ್ಮಾರು ಒಕ್ಕೂಟದ ಅಧ್ಯಕ್ಷ ಸೂರಪ್ಪ ಗೌಡ ಪಟ್ಟೆತ್ತಾನ, ಸವಣೂರು ವಲಯ ಉಸ್ತುವಾರಿ ಚಂದ್ರಶೇಖರ್ ಬರೆಪ್ಪಾಡಿ, ಒಕ್ಕಲಿಗ ಗೌಡ ಸೇವಾ ಸಂಘ ಕುದ್ಮಾರು ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಅಚ್ಚುತ ಗೌಡ ಕಂಪ ಮೊದಲಾದವರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
ಕುದ್ಮಾರು ಗ್ರಾಮದ ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಿಠಲ ಗೌಡ ಕಾಪೆಜಾಲು, ಕಾರ್ಯದರ್ಶಿಯಾಗಿ ಮೇದಪ್ಪ ಕುವೆತ್ತೋಡಿ, ಗೌರವಾಧ್ಯಕ್ಷರಾಗಿ ಸೂರಪ್ಪ ಗೌಡ ಪಟ್ಟೆತ್ತಾನ, ಕೋಶಾಧಿಕಾರಿ ಉಮೇಶ್ ಕೆರೆನಾರು, ಉಪಾಧ್ಯಕ್ಷರಾಗಿ ರಮೇಶ್ ನಡುಮನೆ, ಯೋಗೀಶ್ ಕೆಡೆಂಜಿ ಅವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ
ಮಾಗಣೆ ಗೌಡರಾದ ದೇವಪ್ಪ ಗೌಡ ನಡುಮನೆ, ಊರ ಗೌಡರಾದ ಬೆಳಿಯಪ್ಪ ಗೌಡ ಕೂರ, ಸೋಮಪ್ಪ ಗೌಡ ಅನ್ಯಾಡಿ, ಸುಬ್ರಾಯ ಗೌಡ ಕೆರೆನಾರು, ಅಚ್ಯುತ ಗೌಡ ಕಂಪ, ಶ್ರೀಧರ ಗೌಡ ಕೊಯಕ್ಕುಡೆ, ತಿಮ್ಮಪ್ಪ ಗೌಡ ತೆಕ್ಕಿತ್ತಡಿ ಅವರನ್ನು ಸನ್ಮಾನಿಸಲಾಯಿತು. ಯುವ ಗೌಡ ಸೇವಾ ಸಂಘದ ಸವಣೂರು ವಲಯಾಧ್ಯಕ್ಷ ಲೋಕೇಶ್ ಬಿ.ಎನ್. ಸ್ವಾಗತಿಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಮೇಲ್ವಿಚಾರಕ ವಿಜಯ್ ಕುಮಾರ್ ವಂದಿಸಿದರು. ಎಸ್‍ಕೆಡಿಆರ್ಡಿಪಿ ಯೋಜನಾಧಿಕಾರಿ ಯಶೋಧರ ಗೌಡ ಕೆಡೆಂಜಿಕಟ್ಟ ನಿರೂಪಿಸಿದರು.