(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಸುಳ್ಯ ತಾಲೂಕಿನ ಹಲವೆಡೆ ಉಂಟಾದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿರುವುದಾಗಿ ತಿಳಿಸಿದೆ.
ಇಂದು ಬೆಳಿಗ್ಗೆ 7: 45 ನಿಮಿಷ 47 ಸೆಕೆಂಡಿಗೆ ಭೂಕಂಪನ ಸಂಭವಿಸಿದ್ದು, ಮಡಿಕೇರಿ ದಕ್ಷಿಣ ಕನ್ನಡ ಗಡಿ ಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 3.0ರಷ್ಟು ಭೂಕಂಪನವಾಗಿದೆ. ಹೀಗಾಗಿ ಮಡಿಕೇರಿ ತಾಲೂಕಿನ ಕರಿಕೆ ಭಾಗದ ವಾಯುವ್ಯದಲ್ಲಿ 8.2 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾಗೂ ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 12.1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನ ಅನುಭವವಾಗಿದೆ. 40ರಿಂದ 50 ಕಿಲೋಮೀಟರ್ ದೂರದವರೆಗೆ ಕಂಪನ ಅನುಭವಕ್ಕೆ ಬಂದಿರಬಹುದು ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.