ಪ್ರಧಾನಮಂತ್ರಿ ಜನ್ ಸುರಕ್ಷಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ➤ ಡಾ.ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 25. ಪ್ರಧಾನಮಂತ್ರಿ ಜನ್ ಸುರಕ್ಷಾ ಯೋಜನೆಯಡಿ ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ಕೂಡಲೇ ಸಾಲ ಸೌಲಭ್ಯ ನೀಡುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶುಕ್ರವಾರದಂದು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಬ್ಯಾಂಕ್‍ಗಳ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಬ್ಯಾಂಕ್‍ಗಳಲ್ಲಿ ಬಾಕಿ ಉಳಿದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಮಂಜೂರಾತಿ ನೀಡಬೇಕು, ಆ ಮೂಲಕ ಸರ್ಕಾರದ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು. ಜಿಲ್ಲೆಯ ವಿಕಲಚೇತನರು ಸ್ವ-ಉದ್ಯೋಗ ಕೈಗೊಳ್ಳಲು ಸಂಬಂಧಿಸಿದ ಬ್ಯಾಂಕ್‍ಗಳ ಮುಖ್ಯಸ್ಥರು ಸಹಕಾರ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ ಮಾತನಾಡಿ, 2022-23ರ ಸಾಲ ಯೋಜನೆಯಡಿ ಕೃಷಿಗೆ 6385.26 ಕೋಟಿ ರೂ. ಸಾಲ ವಿತರಣೆಯಾಗಿದೆ. ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ 5093.65 ಕೋಟಿ ರೂ. ಸಾಲ ವಿತರಣೆಯಾಗಿದೆ. ಆದ್ಯತಾ ವಲಯ ಶಿಕ್ಷಣ ಕ್ಷೇತ್ರದಲ್ಲಿ 88.68 ಕೋಟಿ ರೂ., ಗೃಹ ಸಾಲ ಕ್ಷೇತ್ರದಲ್ಲಿ 580.99 ಕೋಟಿ ರೂ. ಹಾಗೂ ಮುದ್ರಾ ಯೋಜನೆಯಡಿ 33,056 ಖಾತೆಯಲ್ಲಿ ಒಟ್ಟು 395.22 ಕೋಟಿ ರೂ.ಗಳಷ್ಟು ಸಾಲ-ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದೆ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿಗೆ ಅವುಗಳ ನಿರ್ವಹಣೆ ಮತ್ತು ಸಂಭಾವ್ಯತೆಯ ಆಧಾರದಲ್ಲಿ ನಿಗದಿತ ಗುರಿ ಹಂಚಿಕೆ ಮಾಡಲಾಗಿದೆ ಎಂದರು. ಕೆನರಾ ಬ್ಯಾಂಕ್ ಮ್ಯಾನೇಜರ್ ಮಂಗಳೂರು ವೃತ್ತ ಕಚೇರಿ ಉಪಮಹಾಪ್ರಬಂಧಕ ಶ್ರೀಕಾಂತ್ ವಿ.ಕೆ., ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಮುರಳಿ ಮೋಹನ್ ಪತಾಕ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕರುಗಳು ಸಭೆಯಲ್ಲಿದ್ದರು.

Also Read  ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ

error: Content is protected !!
Scroll to Top