(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ. 25. ಬ್ಯಾಂಕ್ ಅಕೌಂಟ್ ನಂಬರ್ ಪಡೆದು ವಂಚನೆ ಮಾಡಿರುವ ಕುರಿತು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಅನುರೂಪ್ ಎಂಬವರ ಪತ್ನಿ, ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕಿಯಾಗಿರುವ ಸಜಿಲಾ ಎ. ಎಂಬವರು ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂ.11ರಂದು ಸಜಿಲಾ ರವರ ಮಗ ಪ್ರಣವ್‌ರವರ ಮೊಬೈಲ್ ಸಂಖ್ಯೆ 7899963048ಕ್ಕೆ QP-ATM SBIನಿಂದ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ನಂತರ ಜೂ. 23ರಂದು ಮಧ್ಯಾಹ್ನ 12:53 ಗಂಟೆಗೆ ಮೊಬೈಲ್ ಸಂಖ್ಯೆ 7029216854 ನಂಬ್ರದಿಂದ ಕೆವೈಸಿ ಅಪ್ಡೇಟ್ ಮಾಡಲು ಕಸ್ಟಮರ್ ಕೇರ್ ನಂಬ್ರ: 8240871104ಗೆ ಕರೆ ಮಾಡುವಂತೆ ಮೆಸೇಜ್ ಬಂದಿದ್ದು, ಅದಕ್ಕೆ ಸಜಿಲಾರವರ ಮಗ ಪ್ರಣವ್ ಕರೆ ಮಾಡಿ ಮಾತನಾಡಿದಾಗ ಅವರು ನಿನ್ನ ಖಾತೆಯ ಪಿನ್ ಜನರೇಟ್ ಮಾಡಲು ನಿನ್ನ ಮನೆಯಲ್ಲಿರುವ ಇನ್ನೊಬ್ಬರ ಎಸ್ಬಿಐ ಖಾತೆ ನಂಬ್ರ ಹಾಗೂ ಮೊಬೈಲ್ ನಂಬ್ರ ನೀಡಲು ತಿಳಿಸಿದ್ದಾರೆ. ಅದರಂತೆ ಪ್ರಣವ್ ತಾಯಿ ಸಜಿಲಾರವರ ಎಸ್‌ಬಿಐ ಖಾತೆ ನಂ. 54017832779 ಹಾಗೂ ಮೊಬೈಲ್ ನಂಬ್ರ: 9880076105 ನೀಡಿದ್ದಾರೆ. ನಂತರ ಅದೇ ದಿನ ಅಪರಿಚಿತ ವ್ಯಕ್ತಿಯೋರ್ವರು ಮೊಬೈಲ್ ನಂಬ್ರ 8240871104ದಿಂದ ಕರೆ ಮಾಡಿ ಸಜಿಲಾರವರ ಮೊಬೈಲ್ ನಂಬ್ರ: 9880076105ಕ್ಕೆ ಬಂದಿರುವ ಓಟಿಪಿಗಳನ್ನು ನೀಡಲು ತಿಳಿಸಿದ್ದು ಅದರಂತೆ ಪ್ರಣವ್ ನೀಡಿರುತ್ತಾರೆ. ನಂತರ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಪ್ರಣವ್ ಹತ್ತಿರದ ಎಟಿಎಂಗೆ ಹೋಗಿ ಎಟಿಎಂ ಕಾರ್ಡ್ ಹಾಕಿ Internet Banking Option ನಲ್ಲಿ ಅಪರಿಚಿತ ವ್ಯಕ್ತಿ ಹೇಳಿದ ರೀತಿ ಮಾಡಿದ್ದಾರೆ. ಅದೇ ದಿನ ಸಂಜೆ 7:30ಕ್ಕೆ ಬ್ಯಾಂಕಿನಿಂದ ಕರೆ ಮಾಡಿ ಸಜಿಲಾರವರ ಮೊಬೈಲ್ ನಂಬ್ರ ಬದಲಾಯಿಸಿದ ಬಗ್ಗೆ ವಿಚಾರಿಸಿದಾಗಲೇ ಅವರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿದಾಗ ಜೂ.23ರಂದು ಖಾತೆಗೆ ರೂ. 8 ಲಕ್ಷ ಜಮೆ ಆಗಿದೆ. ನಂತರ ರೂ. 7,080, 25,000, 25,000, 20,000, 20,000, 30,000, 50,000, 50,000, 50,000, 2,00,000, 2,00,000, 20,000, 50,000ದಂತೆ ಹೀಗೆ ಒಟ್ಟು ರೂ.7,47,080 ಹಣ ತೆಗೆದಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ರವರಲ್ಲಿ ವಿಚಾರಿಸಿದಾಗ ನಿಮ್ಮ ಖಾತೆಯಿಂದ ರೂ.8 ಲಕ್ಷ ಲೋನ್ ತೆಗೆದಿರುವುದಾಗಿ ತಿಳಿಸಿರುತ್ತಾರೆ. ಈ ರೀತಿಯಾಗಿ ನಮಗೆ ವಂಚಿಸಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.