(ನ್ಯೂಸ್ ಕಡಬ) newskadaba.com ಕಡಬ, ಜೂ. 24. ಸೈಂಟ್ ಜೋಕಿಮ್ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡಬ ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಮೊದಲ ಸಭೆಯು ಸಂಸ್ಥೆಯ ಸಭಾಭವನದಲ್ಲಿ ನಡೆಯಿತು.
ಸೈಂಟ್ ಜೋಕಿಮ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಅರುಣ್ ವಿಲ್ಸನ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶ್ರಮ ವಹಿಸುತ್ತದೆ. ಶಿಕ್ಷಕರ ಜೊತೆಗೆ ರಕ್ಷಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಂಸ್ಥೆಯ ಜೊತೆಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳಬೇಕೆಂದು ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಕಿರಣ್ ಕುಮಾರ್‌ರವರು ಪ್ರಸ್ತಾವನೆಗೈದು ಸಂಸ್ಥೆಯ ನೀತಿ-ನಿಯಮಾವಳಿಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಲತಾರವರು ವಿದ್ಯಾರ್ಥಿಗಳ ಪ್ರಗತಿಯ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಪ್ರೌಢ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಸಂಯೋಜಕ ಸತೀಶ್ ಪಂಜ ಪದಾಧಿಕಾರಿಗಳ ಚುಣಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ರಕ್ಷಕ-ಶಿಕ್ಷಕ ಸಂಘದ ಕಾಲೇಜು ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸತೀಶ್ ನಾಯ್ಕ್, ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷೆ ಅಂಜು ರವೀಂದ್ರ ಹಾಗೂ ಎಲ್ಲಾ ಬೋಧಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ವೇದಾವತಿ .ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿಭಾಗದ ರಕ್ಷಕ-ಶಿಕ್ಷಕ ಸಂಘದ ಸಂಯೋಜಕಿ ಸುಜಾ ವಿ.ಜೆ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಸಂಯೋಜಕಿ ಶ್ರೀಮತಿ ಏಲಿಕುಟ್ಟಿ ವಂದಿಸಿದರು.