(ನ್ಯೂಸ್ ಕಡಬ) newskadaba.com ಗುವಾಹಟಿ, ನ.10. ಒಟ್ಟು 177 ವಸ್ತುಗಳ ಮೇಲಿನ ತೆರಿಗೆ (ಜಿಎಸ್‌ಟಿ) ದರವನ್ನು ಕಡಿತಗೊಳಿಸಲು ಸರಕು ಮತ್ತು ಸೇವಾತೆರಿಗೆಗಳ(ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಅವರು ಗುವಾಹಟಿಯಲ್ಲಿ ಶನಿವಾರದಂದು ನಡೆದ ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಮಂಡಳಿಯ 23ನೇ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚ್ಯೂಯಿಂಗ್ ಗಮ್‌ನಿಂದ ಹಿಡಿದು ಡಿಟರ್ಜಂಟ್‌ವರೆಗೆ 177 ವಸ್ತುಗಳ ಮೇಲಿನ ತೆರಿಗೆ ದರವನ್ನು ಈಗಿನ ಶೇ.28ರಿಂದ ಶೇ.18ಕ್ಕೆ ತಗ್ಗಿಸಲು ಸಭೆಯು ನಿರ್ಧರಿಸಿದೆ.
ಗರಿಷ್ಠ ಜಿಎಸ್‌ಟಿ ದರವಾಗಿರುವ ಶೇ.28ರ ವ್ಯಾಪ್ತಿಯಲ್ಲಿ 227ರಷ್ಟಿದ್ದ ಸರಕುಗಳ ಸಂಖ್ಯೆ ಮಂಡಳಿಯ ನಿರ್ಧಾರದಿಂದಾಗಿ ಈಗ 50ಕ್ಕೆ ಇಳಿದಿದೆ ಎಂದರು.
ದಿನಬಳಕೆ ವಸ್ತುಗಳನ್ನು ಶೇ.28ರ ಉನ್ನತ ತೆರಿಗೆ ವರ್ಗಕ್ಕೆ ಸೇರಿಸಿದ್ದರ ವಿರುದ್ಧ ರಾಜ್ಯಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಫಿಟ್‌ಮೆಂಟ್ ಸಮಿತಿಯು ಈ ವರ್ಗದಲ್ಲಿ 62 ವಸ್ತುಗಳನ್ನು ಉಳಿಸಿಕೊಂಡು ಇತರ ವಸ್ತುಗಳ ಮೇಲಿನ ತೆರಿಗೆಯನ್ನು ತಗ್ಗಿಸುವಂತೆ ಮಂಡಳಿಗೆ ಶಿಫಾರಸು ಮಾಡಿತ್ತು. ಆದರೆ ಜಿಎಸ್‌ಟಿ ಮಂಡಳಿಯು ಒಂದು ಹೆಜ್ಜೆ ಮುಂದೆ ಹೋಗಿ ಇನ್ನೂ 12 ವಸ್ತುಗಳನ್ನು ಶೇ.28ರ ತೆರಿಗೆ ವ್ಯಾಪ್ತಿಯಿಂದ ತೆಗೆದು ಶೇ.18 ತೆರಿಗೆ ವ್ಯಾಪ್ತಿಗೆ ಸೇರಿಸಿದೆ.
ಎಲ್ಲ ವಿಧಗಳ ಚ್ಯೂಯಿಂಗ್ ಗಮ್‌ಗಳು, ಚಾಕೊಲೇಟ್‌ಗಳು, ಪ್ರಸಾದನ ಸಾಮಗ್ರಿಗಳು, ವಾಷಿಂಗ್ ಪೌಡರ್, ಡಿಟರ್ಜಂಟ್, ಗ್ರಾನೈಟ್ ಮತ್ತು ಮಾರ್ಬಲ್‌ಗಳ ಮೇಲಿನ ತೆರಿಗೆ ದರ ಈಗ ಶೇ.28ರಿಂದ ಶೇ.18ಕ್ಕಿಳಿದಿದೆ. ಪೈಂಟ್, ಸಿಮೆಂಟ್, ವಾಷಿಂಗ್ ಮಷಿನ್ ಮತ್ತು ಏರ್ ಕಂಡಿಷನರ್‌ಗಳನ್ನು ಶೇ.28ರ ತೆರಿಗೆ ಗುಂಪಿನಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.