ಊಟ ಕೇಳಿದ ಮಗುವಿಗೆ ಅನ್ನದ ಬದಲು ಕಾದ ಸಲಾಕೆಯಿಂದ ಬರೆಯಿಟ್ಟ ಮಲತಾಯಿ..!!! ➤ ರೋಧಿಸುತ್ತಾ ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಎಳೆಯ ಕಂದಮ್ಮ..!!

(ನ್ಯೂಸ್ ಕಡಬ) newskadaba.com ಚಿತ್ತಾಪುರ, ಜೂ. 07. ‘ಅಮ್ಮ ಹಸಿವಾಗಿದೆ ಊಟ ಕೊಡು’ ಎಂದ ಮಗುವಿಗೆ ಬಾ ಕೊಡ್ತೀನಿ ಎಂದು ಹತ್ತಿರ ಕರೆದ ಮಲತಾಯಿ, ಅನ್ನದ ಬದಲು ಕೆಂಡದಿಂದ ಕಾದ ಸಲಾಕೆಯಿಂದ ಕೈಗೆ ಬರೆಯಿಟ್ಟಿದ್ದು, ಸುಟ್ಟ ಗಾಯದಿಂದ ರೋಧಿಸಿದ ಮಗು ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಘಟನೆ ತಾಲೂಕಿನ ವಾಡಿ ನಗರದ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ನಡೆದಿದೆ.

ಗಾಯಗೊಂಡ ಮಗುವನ್ನು ಸೊನಾಲಿಕಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮೃತಪಟ್ಟ ಹಿನ್ನೆಲೆ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದು, ಮಗುವನ್ನು ಆಕೆಯ ಕೈಗಿತ್ತು ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದ ಎನ್ನಲಾಗಿದೆ. ನಾಲ್ಕು ವರ್ಷದ ಮಗು ಊಟ ಕೇಳಿದರೆ ಮಲತಾಯಿ ಹೊಡೆಯುವುದು ಬಡಿಯುವುದು ಮಾಡುತ್ತಾಳೆ. ಇದರಿಂದ ಮಗು ದಿನನಿತ್ಯ ದೌರ್ಜನ್ಯ ಅನುಭವಿಸುತ್ತಿದ್ದು, ಬಡಾವಣೆಯ ಜನರು ಆಕೆಯ ವಿರುದ್ದ ಸಿಡಿದೆದ್ದಿದ್ದರು. ಸೋಮವಾರದಂದು ಮತ್ತೆ ಮಗುವಿನ ಕೈಗೆ ಬರೆ ಬಿದ್ದು ಅಳುತ್ತಾ ಕೂತಿದ್ದು, ಇದರಿಂದ ಜನರು ಒಟ್ಟಾಗಿ ಮತ್ತೆ ಆಕೆಯನ್ನು ತರಾಟೆಗೆ ತೆಗೆದುಕೊಂಡು ಬಳಿಕ ಮಗುವನ್ನು ಇಲ್ಲೇ ಬಿಟ್ಟರೆ ಸಾಯಿಸುತ್ತಾಳೆ ಎಂದು ನಿರ್ಧರಿಸಿ ವಾಡಿ ಪೊಲೀಸರಿಗೆ ಹಾಗೂ ಚೈಲ್ಡ್ ಲೈನ್ ಸಹಾಯವಾಣಿಗೆ ದೂರು ನೀಡಿದ್ದಾರೆ. ಮಗು ಸದ್ಯ ಚೈಲ್ಡ್ ಲೈನ್ ಸಂಸ್ಥೆಯ ವಶದಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ವಾಡಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ಮುಂದುವರಿಸಿದ್ದಾರೆ.

Also Read  ಇಂದಿನಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭ

error: Content is protected !!
Scroll to Top