(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ಯುವಜನತೆ ದೇಶದ ಆಸ್ತಿ, ಆ ಶಕ್ತಿಗೆ ಸೂಕ್ತ ಸಮಯದಲ್ಲಿ ಅಗತ್ಯ ಮಾರ್ಗದರ್ಶನ ದೊರೆಯಬೇಕು, ಅದಕ್ಕಾಗಿ ಕರ್ನಾಟಕ ಯುವ ನೀತಿ-2021ರ ಜಾರಿ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಅಭಿಪ್ರಾಯಪಟ್ಟರು. ಅವರು ಜೂ.4ರ ಶನಿವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (ಮೈಸೂರು) ಮತ್ತು ಯುನಿಸೆಫ್ ಹೈದ್ರಾಬಾದ್ ಮತ್ತು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ (ಕೊಪ್ಪಳ)ಯ ಸಹಯೋಗದಲ್ಲಿ ಕರ್ನಾಟಕ ಯುವ ನೀತಿ-2021 ಕುರಿತು ಅಭಿಪ್ರಾಯ ಸಂಗ್ರಹಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಯುವ ನೀತಿ-2021 ರಾಜ್ಯದ ಬೆಳವಣಿಗೆಯ ದಿಕ್ಕನ್ನು ನಿರ್ಧರಿಸಬಲ್ಲದು ಇದರ ಯಶಸ್ಸಿಗೆ ಎಲ್ಲರ ಸಲಹೆ, ಮಾರ್ಗದರ್ಶನಗಳು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಯುವನೀತಿಯ ಪ್ರಾಮುಖ್ಯತೆ, ವ್ಯಾಪಕತೆಯನ್ನು ಮೊದಲು ಅರಿತುಕೊಳ್ಳಬೇಕು. ಈ ಕಾರ್ಯನೀತಿಯನ್ನು ನಿರ್ದಿಷ್ಟ ಗುರಿಯೊಂದಿಗೆ, ಒಂದು ಚೌಕಟ್ಟಿನೊಳಗೆ ಜಾರಿಗೆ ತಂದರೆ ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯ ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ರಮೇಶ್ ವೆಂಕಟರಾಮ್, ಯುವ ನೀತಿಯ ಹಿಂದೆ ಯುವಕರ ಅಭಿವೃದ್ಧಿ ಮತ್ತು ಅಭಿವೃದ್ಧಿಗಾಗಿ ಯುವಕರನ್ನು ರೂಪಿಸುವ ಗುರಿಯಿದೆ. 15 ರಿಂದ 29 ವರ್ಷ ವಯಸ್ಸಿನ ಯುವಜನತೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಮಟ್ಟದ ಯೋಜನೆ ರೂಪಿಸಲಾಗಿದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ (ಕೊಪ್ಪಳ)ಯ ಹರೀಶ್ ಜೋಗಿ ವೇದಿಕೆಯಲ್ಲಿದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳು, ಎನ್.ಎಸ್.ಎಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರತಿನಿಧಿಗಳನ್ನು 6 ತಂಡಗಳಾಗಿ ವಿಂಗಡಿಸಿ, ಯೋಜನೆಯ 6 ಗಮನ ಕೇಂದ್ರೀಕೃತ ಕ್ಷೇತ್ರಗಳ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು.